ಬಿಐಟಿ, ಬೀಡ್ಸ್ ನಿಂದ ಯಶಸ್ವಿ 'ಗ್ರೀನ್ ವಾಕಥಾನ್'

Update: 2021-09-25 09:13 GMT

ಮಂಗಳೂರು, ಸೆ.25: ವಿಶ್ವ ಹಸಿರು ಕಟ್ಟಡ ಸಪ್ತಾಹದ ಪ್ರಯುಕ್ತ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಬಿಐಟಿ ) ಹಾಗೂ ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ವತಿಯಿಂದ ಇಂದು ಬೆಳಗ್ಗೆ 'ಗ್ರೀನ್ ವಾಕಥಾನ್ 2021' ನಡೆಯಿತು.

ವಾಕಥಾನ್‌ಗೆ ಇಂದು ಬೆಳಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಆಡಿಟೋರಿಯಂ ಎದುರು ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛ ಮನಸ್ಸು ಹೊಂದಿದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ. ನಮಗೆ ಜೀವ ಮೊದಲು, ಜೀವನ ಆ ಬಳಿಕವಾಗಿದೆ. ಜೀವ ಉಳಿಯಲು ಪ್ರಕೃತಿ ಮುಖ್ಯವಾಗಿದೆ. ಹಾಗಾಗಿ ಪ್ರಕೃತಿ ಉಳಿಸುವ ಕೈಂಕರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬುದೂ ಮುಖ್ಯವಾಗಿದೆ. ಒಂದು ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಸಾಕಷ್ಟು ಮರಗಳನ್ನು ಕಡಿಯುತ್ತೇವೆ. ಆದರೆ ಮತ್ತೆ ಸಸಿ ನೆಡಲು ಮುಂದಾಗುವುದಿಲ್ಲ. ಸಸಿಗಳನ್ನು ನೆಟ್ಟರಷ್ಟೇ ಪರಿಸರ ಹಸುರೀಕರಣಗೊಳ್ಳಬಹುದು. ಪ್ರಕೃತಿ ಪ್ರೇಮ, ಪರಿಸರ ಸ್ವಚ್ಛತೆಯು ವಾಕಥಾನ್‌‌ನ ಉದ್ದೇಶವಾಗಿದೆ ಎಂದರು.

ವಿಶ್ವದಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಇದು ಮನುಕುಲದ ಮೇಲೆ ಭಾರೀ ಪರಿಣಾಮ ಬೀರಿದೆ. ಹಾಗಾಗಿ ಭೂಮಿಯನ್ನು ರಕ್ಷಿಸಲು ಮಾನವನು ಅಪಾರವಾಗಿ ಶ್ರಮಿಸಬೇಕಿದೆ. ಪ್ರಕೃತಿಯ ಮುಂದೆ ನಾವು ಏನೂ ಅಲ್ಲ. ಪ್ರಕೃತಿಗಿಂತ ದೊಡ್ಡವರೂ ನಾವಲ್ಲ. ಪ್ರಕೃತಿಯನ್ನು ಉಳಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ. ಮಂಜೂರ್ ಬಾಷಾ ಸ್ವಾಗತಿಸಿದರು.

ಬೀಡ್ಸ್ ಪ್ರಾಂಶುಪಾಲ ಎ.ಆರ್. ಅಶೋಕ್ ಮೆಂಡೋನ್ಸಾ,  ಡಾ.ಅಝೀಝ್ ಮುಸ್ತಫ, ವೆಂಕಟೇಶ್ ಪೈ, ಸಂತೋಷ್ ಡಿಸೋಜ, ಬಿಐಟಿ- ಇಸಿಇ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೊ. ಮುಬೀನಾ ತಾಜ್ ಬಳಗವು ಪ್ರಾರ್ಥನಾ ಗೀತೆ ಹಾಡಿತು.


ಬಿಐಟಿ ಕ್ಯಾಂಪಸ್‌ನಲ್ಲಿ ಸಮಾರೋಪ

 ‘ಗ್ರೀನ್ ವಾಕಥಾನ್’ ಸಮಾರೋಪ ಸಮಾರಂಭವು ಬಿಐಟಿ ಕ್ಯಾಂಪಸ್‌ನಲ್ಲಿ ನಡೆಯಿತು.

ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್‌(ಬಿಟಿಪಿ)ವರೆಗೆ ಗ್ರೀನ್ ವಾಕಥಾನ್ ನಲ್ಲಿ ಭಾಗಿಯಾದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಆ ಬಳಿಕ ಇನ್ನೋಳಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಸ್ವತಃ ಗಿಡಗಳನ್ನು ನೆಟ್ಟರಲ್ಲದೆ ಬಿಐಟಿ ವಿದ್ಯಾರ್ಥಿಗಳಿಂದಲೂ ಗಿಡಗಳನ್ನು ನೆಡಿಸುವ ಮೂಲಕ ಪರಿಸರ ಆಸಕ್ತಿ ಮೂಡಿಸಿದರು.

ಬಿಐಟಿ, ಬೀಡ್ಸ್ ಮತ್ತು ಬಿಐಟಿ ಪಾಲಿಟೆಕ್ನಿಕ್‌ನ ನೂರಾರು ವಿದ್ಯಾರ್ಥಿಗಳು ಸುಮಾರು ಆರು ಎಕರೆ ವಿಸ್ತೀರ್ಣದ ಜಾಗದಲ್ಲಿ ಬರ್ಮಾ, ಗಡುವಾ, ಸಿಹಿ, ಸ್ಟಾಕ್‌ಸೈ, ಟುಲ್ಟಾ ಸಹಿತ 5 ಬಗೆಯ 350ಕ್ಕೂ ಅಧಿಕ ಗಿಡಗಳನ್ನು 'ನೆಟ್ಟು ಗ್ರೀನ್ ವಾಕಥಾನ್' ಸಮಾರೋಪಗೊಳಿಸಿದರು.

ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ಹೊಂದಿರುವ ಇನ್ನೋಳಿ ಪರಿಸರವು ಕಲ್ಲಿನ ಕೋರೆಗಳಿಂದ ತುಂಬಿದೆ. ಈ ಪರಿಸರವನ್ನು ಹಸಿರುಮಯಗೊಳಿಸುವ ಮಹತ್ತರವಾದ ಉದ್ದೇಶವನ್ನು ಬ್ಯಾರೀಸ್ ಗ್ರೂಪ್ ಹೊಂದಿದ್ದು, ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News