ಸೆ. 27, 29ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ: ನಿಷೇದಾಜ್ಞೆ

Update: 2021-09-25 12:07 GMT

ಉಡುಪಿ, ಸೆ. 25: ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿಯ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ಸೆ.27 ಮತ್ತು 29ರಂದು ನಡೆಯಲಿವೆ. ಜಿಲ್ಲೆಯ 133 ಪ್ರೌಢ ಶಾಲೆಗಳಿಂದ ಒಟ್ಟು 618 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 27ರಂದು ಕೋರ್ ವಿಷಯಗಳ ಪರೀಕ್ಷೆ ನಡೆದರೆ, 29ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

ಉಡುಪಿಯ ಸರಕಾರಿ ಪ.ಪೂ.ಕಾಲೇಜು (188 ವಿದ್ಯಾರ್ಥಿಗಳು), ಉಡುಪಿ ಸಂತ ಸಿಸಿಲಿ ಪ್ರೌಢಶಾಲೆ (ಖಾಸಗಿ ಅಭ್ಯರ್ಥಿಗಳು), ಸರಕಾರಿ ಪ್ರೌಢಶಾಲೆ ಬ್ರಹ್ಮಾವರ (81), ಸರಕಾರಿ ಪ.ಪೂ.ಕಾಲೇಜು ಬೈಂದೂರು (103), ಸರಕಾರಿ ಪ.ಪೂ.ಕಾಲೇಜು ಕುಂದಾಪುರ(156), ಭುವನೇಂದ್ರ ಪ್ರೌಢಶಾಲೆ ಕಾರ್ಕಳ (80)ದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144ರಂತೆ ನಿಷೇಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಕೂಮಾರ್ ರಾವ್ ಎಂ. ಆದೇಶ ಹೊರಡಿಸಿದ್ದಾರೆ.

ಸರಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳಂತೆ ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದೆ. ಪ್ರತಿ ಕೊಠಡಿಗಳಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಇರುತ್ತದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News