ಭಾರತದ ವೈದ್ಯ ಪದ್ಧತಿಯನ್ನು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿಸಲು ಕ್ರಮ: ಕೇಂದ್ರ ಸಚಿವ ಸೋನೊವಾಲ

Update: 2021-09-25 14:03 GMT

ಉಡುಪಿ, ಸೆ.25: ಆಯುರ್ವೇದ, ಯುನಾನಿ, ಸಿದ್ಧ, ಪ್ರಕೃತಿ ಸೇರಿದಂತೆ ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳನ್ನು ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳಾಗಿ ಬೆಳೆಸಲು ಕೇಂದ್ರ ಸರಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಆಯುಷ್ ಖಾತೆಯ ಸಚಿವ ಸರ್ಬಾನಂದ ಸೋನಾವಾಲ ಹೇಳಿದ್ದಾರೆ.

ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು- ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ‘ರತ್ನಶ್ರೀ’ ಆರೋಗ್ಯಧಾಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಆಯುಷ್ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ದೇಶದ ವಿವಿಧ ಭಾಗಗಳಲ್ಲಿರುವ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಅಧ್ಯಯನ ನಡೆಸುತಿದ್ದು, ಅವುಗಳನ್ನು ವೈಜ್ಞಾನಿಕ ಚೌಕಟ್ಟಿನೊಳಗೆ ತರಲು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಕೇಂದ್ರದ ಬಂದರು, ಶಿಪ್ಪಿಂಗ್ ಮತ್ತು ಜಲಸಾರಿಗೆ ಸಚಿವರೂ ಆಗಿರುವ ಸರ್ಬಾನಂದ ಸೋನೊವಾಲ ನುಡಿದರು.

ಈ ಮೂಲಕ ಸಮಾಜದ ಆರೋಗ್ಯವನ್ನು ರೂಪಿಸುವಲ್ಲಿ ಸಾಂಪ್ರದಾಯಿಕ ಆರೋಗ್ಯ ಚಿಕಿತ್ಸಾ ಪದ್ಧತಿಗಳನ್ನೂ ಅಳವಡಿಸಿಕೊಳ್ಳುವ ಮೂಲಕ ರೋಗಗಳಿಂದ ಜನರನ್ನು ಸಂರಕ್ಷಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಇದೀಗ ದೇಶ-ವಿದೇಶ ಗಳಲ್ಲಿ ಆಯುರ್ವೇದ ಅಧ್ಯಯನಕ್ಕೆ ಆಸಕ್ತಿ ಹೆಚ್ಚುತಿದ್ದು, ಆಯುರ್ವೇದದ ವಿಶ್ವಾಸಾರ್ಹತೆ ಹಾಗೂ ಸ್ವೀಕಾರಾರ್ಹತೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ದೇಶದ ಪ್ರತಿಯೊಬ್ಬ ನಾಗರಿಕರೂ ಪ್ರತಿದಿನ ಕನಿಷ್ಠ ಐದು ನಿಮಿಷವಾದರೂ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ತನು, ಮನ, ಆತ್ಮ ತಂದುರಸ್ತ್ (ಆರೋಗ್ಯಪೂರ್ಣ)ಆಗಿರುತ್ತದೆ ಎಂದೂ ಆಯುಷ್ ಸಚಿವ ಸರ್ಬಾನಂದ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂ ಎಜ್ಯುಕೇಷನಲ್ ಸೊಸೈಟಿಯ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಆಯುರ್ವೇದವು ಜನರ ಕೊನೆಯ ಆಯ್ಕೆಯಾಗದೇ, ಮೊದಲ ಆಯ್ಕೆಯಾಗಬೇಕೆಂಬುದು ನಮ್ಮ ಗುರಿಯಾಗಿದೆ. ಯೋಗ ಮತ್ತು ಆಯುರ್ವೇದಗಳಿಗೆ ಈಗ ವಿಶ್ವ ಮಾನ್ಯತೆಯೂ ದೊರೆಯುತ್ತಿದೆ. ಆಯುರ್ವೇದ ದಲ್ಲಿ ಕೊರೋನದಿಂದ ಹಿಡಿದು ಕ್ಯಾನ್ಸರ್‌ವರೆಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ಇದೆ. ಇದು ಇನ್ನಷ್ಟು ಸಾರ್ವತ್ರಿಕಗೊಳ್ಳಬೇಕು ಎಂದರು.

ಆಸ್ಪತ್ರೆಯ ನಿರೀಕ್ಷಣ ಕೊಠಡಿಯಲ್ಲಿರುವ ಸರಸ್ವತಿ ವಿಗ್ರಹ ಹಾಗೂ ಶೃಂಗಾರ (ಆಸ್ತೆಟಿಕ್ ಮೆಡಿಸಿನ್) ವಿಭಾಗವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಡಿಲಕ್ಸ್ ವಾರ್ಡ್ (ಹೆಲ್ತ್ ಕಾಟೇಜ್)ನ್ನು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್, ಸ್ಪೆಷಲ್ ವಾರ್ಡ್‌ನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ. ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ವಂದಿಸಿದರು. ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವೀಂದ್ರ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News