ಮಂಗಳೂರು : ಉದ್ಯಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ರದ್ದುಪಡಿಸಿದ ಹೈಕೋರ್ಟ್

Update: 2021-09-25 15:50 GMT

ಮಂಗಳೂರು, ಸೆ.25: ಮುಲ್ಕಿಯ ಬ್ಯಾಂಕ್‌ವೊಂದರ ಮುಂಭಾಗ ಎರಡು ವರ್ಷಗಳ ಹಿಂದೆ ನಡೆದಿದ್ದ ಸುಳ್ಯ ಮೂಲದ ಉದ್ಯಮಿ ಅಬ್ದುಲ್ ಲತೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ಪ್ರಕರಣದ 10 ಆರೋಪಿಗಳ ಪೈಕಿ ಕಾರ್ನಾಡ್ ನಿವಾಸಿ ಮುಹಮ್ಮದ್ ರಾಝಿಮ್ (24), ಬಪ್ಪನಾಡು ನಿವಾಸಿ ಮುಹಮ್ಮದ್ ಹಾಸಿಮ್ (28), ಉಡುಪಿ ಉಚ್ಚಿಲ ನಿವಾಸಿ ಅಬೂಬಕರ್ ಸಿದ್ದೀಕ್ (28), ಉಳ್ಳಂಜೆ ನಿವಾಸಿ ಮುಹಮ್ಮದ್ ವಫಾ ಯಾನೆ ಮುಸ್ತಫಾ (29), ಕಾಪಿಕಾಡ್ ನಿವಾಸಿ ಮಯ್ಯದ್ದಿ (29), ಪಕ್ಷಿಕೆರೆಯ ಬಶೀರ್ ಹುಸೈನ್ (39) ಎಂಬವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಜಾಮೀನನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣದ ಆರು ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು ಸುಮಾರು ಆರು ತಿಂಗಳ ಹಿಂದೆ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಮೃತ ಅಬ್ದುಲ್ ಲತೀಫ್ ಅವರ ಪತ್ನಿ, ನ್ಯಾಯವಾದಿ ಮುಬೀನಾ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ವಾದ ಮಂಡಿಸಿ ಆರೋಪಿಗಳ ಜಾಮೀನನ್ನು ರದ್ದುಪಡಿಸಲು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಲಯವು ಆರು ಆರೋಪಿಗಳಿಗೆ ಕೆಳ ನ್ಯಾಯಾಲಯ ನೀಡಿದ್ದ ಜಾಮೀನು ಅರ್ಜಿಯನ್ನು ರದ್ದುಪಡಿಸಿದೆ. ಜೊತೆಗೆ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶಿಸಿ ತೀರ್ಪು ಪ್ರಕಟಿಸಿದೆ.

ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಾರ್ನಾಡು ನಿವಾಸಿ ದಾವೂದ್ ಹಕೀಮ್‌ಗೆ (35) ಹೈಕೋರ್ಟ್ ನೀಡಿದ ಜಾಮೀನು ಆದೇಶ ರದ್ದುಪಡಿಸಬೇಕೆಂದು ನ್ಯಾಯವಾದಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ನ್ಯಾಯಾಲಯವು ಆರೋಪಿ ಹಕೀಂಗೆ ನೋಟಿಸ್ ಜಾರಿ ಮಾಡಿದೆ.

ಮತ್ತೋರ್ವ ಆರೋಪಿ ಬಪ್ಪನಾಡು ನಿವಾಸಿ ರಿಯಾಝ್ ಯಾನೆ ನಿಸಾರ್‌ ಸದ್ಯ ಯಾವುದೇ ನ್ಯಾಯಾಲಯದಿಂದ ಜಾಮೀನು ಸಿಗದೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣದ ಇನ್ನು ಇಬ್ಬರು ಆರೋಪಿಗಳಾದ ಕಾರ್ನಾಡು ನಿವಾಸಿ ಮುಹಮ್ಮದ್ ಬಾವ ಯಾನೆ ಟಿಂಬರ್ ಬಾವ (70), ಪಕ್ಷಿಕೆರೆ ನಿವಾಸಿ ಮುಸ್ತಫಾ (28) ಎಂಬವರಿಗೆ ಈಗಾಗಲೇ ಹೈಕೋರ್ಟ್ ಜಾಮೀನು ನೀಡಿದೆ. ಇವರ ಜಾಮೀನು ರದ್ದುಪಡಿಸುವಂತೆ ನ್ಯಾಯವಾದಿ ಮುಬೀನಾ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದುಪಡಿಸಲು ಮೇಲ್ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News