ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುತ್ತಿದೆ ‘ಗುಲಾಬ್’ ಚಂಡಮಾರುತ

Update: 2021-09-25 16:06 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ,ಸೆ.25: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವುಂಟಾಗಿದ್ದು,ಮುಂದಿನ ಆರು ಗಂಟೆಗಳಲ್ಲಿ ‘ಗುಲಾಬ್’ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶನಿವಾರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.

ಉತ್ತರ ಮತ್ತು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಕಳೆದ ಆರು ಗಂಟೆಗಳಲ್ಲಿ ಪ್ರತಿ ಗಂಟೆಗೆ 14 ಕಿ.ಮೀ.ವೇಗದಲ್ಲಿ ಪಶ್ಚಿಮ ದಿಕ್ಕಿನತ್ತ ಚಲಿಸಿದೆ ಮತ್ತು ಗೋಪಾಲಪುರ (ಒಡಿಶಾ)ದಿಂದ 470 ಕಿ.ಮೀ. ಪೂರ್ವ-ಈಶಾನ್ಯದಲ್ಲಿ ಮತ್ತು ಕಳಿಂಗಪಟ್ಟಣಂ (ಆಂಧ್ರಪ್ರದೇಶ)ದಿಂದ 540 ಕಿ.ಮೀ.ಪೂರ್ವ-ವಾಯುವ್ಯದಲ್ಲಿ ಈಶಾನ್ಯ ಮತ್ತು ಪಶ್ಚಿಮಮಧ್ಯ ಬಂಗಾಳ ಕೊಲ್ಲಿಯಲ್ಲಿ ಸ್ಥಿತಗೊಂಡಿದೆ. ಮುಂದಿನ ಆರು ಗಂಟೆಗಳಲ್ಲಿ ಅದು ಚಂಡಮಾರುತದ ರೂಪ ಪಡೆದುಕೊಳ್ಳುವ ಮತ್ತು ಪಶ್ಚಿಮಾಭಿಮುಖವಾಗಿ ಚಲಿಸಿ ಸೆ.26ರ ಸಂಜೆಯ ವೇಳೆಗೆ ಕಳಿಂಗಪಟ್ಟಣಂ ಸುತ್ತ ವಿಶಾಖಪಟ್ಟಣ ಮತ್ತು ಗೋಪಾಲಪುರಗಳ ನಡುವೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ತೀರಗಳನ್ನು ದಾಟುವ ಸಾಧ್ಯತೆಯಿದೆ ಎಂದು ಮುನ್ಸೂಚನೆಯನ್ನು ನೀಡಿರುವ ಐಎಂಡಿ, ಸೆ.26ರಂದು ಒಡಿಶಾದ ಕಂಧಮಾಲ್, ಗಂಜಾಂ, ರಾಯಗಡ,ಮಲ್ಕನಗಿರಿ,ಕೋರಾಪತ್,ನವರಂಗಪುರ ಮತ್ತು ಗಜಪತಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಸೆ.27 ಮತ್ತು 28ರ ನಡುವೆ ದಿಢೀರ್ ನೆರೆ ಮತ್ತು ಭೂಕುಸಿತಗಳೂ ಉಂಟಾಗಬಹುದು ಎಂದು ಹೇಳಿದೆ.

ಸಂಭಾವ್ಯ ಪ್ರಕೃತಿ ವಿಕೋಪವನ್ನು ಎದುರಿಸಲು ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News