ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ: ಸಚಿವ ಡಾ.ಅಶ್ವಥ ನಾರಾಯಣ್

Update: 2021-09-25 16:13 GMT

ಉಡುಪಿ, ಸೆ.25: ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಅಭಿವೃದ್ಧಿಗೆ ಬುನಾದಿ ಯಾಗಲಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸರಕಾರ ಯಾವುದೇ ನೀತಿ ಯನ್ನು ಜಾರಿ ತರಲು ಸಾಧ್ಯವಿಲ್ಲ. ಆದುದರಿಂದ ವಿರೋಧ ಪಕ್ಷಗಳು ಈ ಕುರಿತು ವಿನಾಕಾರಣ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಡಾ. ಅಶ್ವಥ ನಾರಾಯಣ ಸಿ.ಎನ್. ಹೇಳಿದ್ದಾರೆ.

ಅಜ್ಜರಕಾಡು ಮಹಿಳಾ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿದ ಸ್ನಾತಕೋತ್ತರ ರಸಾಯನಶಾಸ್ತ್ರ ಪ್ರಯೋಗಾಲಯ ಮತ್ತು ಸುಸಜ್ಜಿತ ಗ್ರಂಥಾಲಯವನ್ನು ಶನಿವಾರ ಉದ್ಘಾಟಿಸಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಜಿಲ್ಲಾಡಳಿತದ ಪಾತ್ರವೂ ಮಹತ್ತರವಾಗಿದೆ. ಈ ಶಿಕ್ಷಣ ನೀತಿಯ ಮೂಲಕ ಅಭಿವೃದ್ಧಿಶೀಲ ರಾಷ್ಟ್ರವಾಗಿ ನವಭಾರತ ನಿರ್ಮಾಣವಾಗಬೇಕು. ಹೊಸ ನೀತಿಯಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ಪರಿಪೂರ್ಣ ವ್ಯಕ್ತಿ ನಿರ್ಮಾಣಕ್ಕೂ ಇದು ಸಹಕಾರಿಯಾಗಲಿದೆ. ಅ.1ರಿಂದ ಹೊಸ ಬ್ಯಾಚ್‌ಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.

ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು. ಸರಕಾರಿ ಸಂಸ್ಥೆಗಳು ಯಾವುದೇ ಕಾರಣಕ್ಕೂ ಬಾಗಿಲು ಮುಚ್ಚುವುದಿಲ್ಲ. ಈಗಾಗಲೇ 1.60 ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟ್ಯಾಬ್‌ಗಳನ್ನು ನೀಡಲಾಗಿದೆ. ಶಿಕ್ಷಣದ ಮೂಲಕ ತಂತ್ರಜ್ಞಾನದ ಬಳಕೆಯಾಗಬೇಕು. ಸ್ಮಾರ್ಟ್ ಕ್ಲಾಸ್‌ಗಳ ಸಂಖ್ಯೆ ಹೆಚ್ಚಳವಾಗಬೇಕು. ರಾಜ್ಯದ 8 ಸಾವಿರ ಕ್ಲಾಸ್‌ರೂಂಗಳ ಪೈಕಿ 2500 ಕ್ಲಾಸ್ ರೂಂಗಳು ಸ್ಮಾರ್ಟ್ ಆಗಿವೆ. ಉಳಿದ 5,500 ಕ್ಲಾಸ್‌ರೂಂಗಳನ್ನು ಸ್ಮಾರ್ಟ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಡಾ.ಶಿವಾನಂದ ನಾಯ್ಕ ಅವರ ಜೀವ ರಸಾಯನಶಾಸ್ತ್ರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ. ಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಪಂ ಸಿಇಓ ಡಾ. ನವೀನ್ ಭಟ್, ಕಾಲೇಜು ಶಿಕ್ಷಣ ಮಂಗಳೂರು ವಲಯ ಜಂಟಿ ನಿರ್ದೇಶಕಿ ಜೆನ್ನಿಫರ್ ಲೊಲಿಟಾ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ಕೆ.ಶ್ರೀಧರ ಪ್ರಸಾದ್ ವಂದಿಸಿದರು. ಡಾ.ರೋಶನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News