ಮಂಗಳೂರಿನಲ್ಲಿ ಆಯುಷ್ ಕ್ರೀಡಾ ಔಷಧಿ ಕೇಂದ್ರ ಸ್ಥಾಪನೆಗೆ ಚಿಂತನೆ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್

Update: 2021-09-25 16:58 GMT

ಮಂಗಳೂರು, ಸೆ.25: ಮಂಗಳೂರಿನಲ್ಲಿ ಆಯುಷ್ ಕ್ರೀಡಾ ಔಷಧಿ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಕೇಂದ್ರ ಬಂದರು, ಹಡಗು, ಜಲ ಸಾರಿಗೆ ಮತ್ತು ಆಯುಷ್ ಇಲಾಖೆಯ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

ಶನಿವಾರ ವೆನ್ಲಾಕ್ ಆಯುಷ್ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಸಂಯುಕ್ತ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರಿಗೆ ಆಯುಷ್ ಕ್ರೀಡಾ ಔಷಧಿ ಕೇಂದ್ರ ಮಂಜೂರು ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ತುರ್ತಾಗಿ ಗಮನಹರಿಸುವ ಮೂಲಕ ಆಯುಷ್ ಕ್ರೀಡಾ ಔಷಧಿ ಕೇಂದ್ರ ತೆರೆಯಲು ಕೇಂದ್ರ ಆಯುಷ್ ಸಚಿವಾಲಯದ ಮೂಲಕ ಎಲ್ಲಾ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಜೊತೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಸೇವೆ ನೀಡುವುದು ಜನರನ್ನು ಆರೋಗ್ಯವಂತರನ್ನಾಗಿ ಮಾಡುುದು ಮುಖ್ಯ ಗುರಿಯಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ , ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ, ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರು ಇಲೆಕ್ಟ್ರಿಕಲ್ ಲಿಮಿಟೆಡ್‌ನ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್, ಜಿಲ್ಲಾ ಆರೋಗ್ಯ ಅಧೀಕ್ಷಕ ಡಾ.ಸದಾಶಿವ ಶ್ಯಾನ್‌ಬೋಗ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಡಾ.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

''ಆಸ್ಪತ್ರೆಗೆ ಬರುವ ರೋಗಿಗಳನ್ನು ಗೌರವಯುತವಾಗಿ ಬರಮಾಡಿಕೊಂಡು ಅವರ ಆರೈಕೆ ಮಾಡಿದಾಗ ರೋಗಿ ಶೀಘ್ರ ಗುಣಮುಖನಾಗಲು ಸಹಾಯವಾಗುತ್ತದೆ. ಪರಿಸರ ಸಂರಕ್ಷಣೆಯೊಂದಿಗೆ ಆರ್ಥಿಕ ಅಭಿವೃದ್ಧಿ, ಮಾನವೀಯತೆಯೊಂದಿಗೆ ತಂತ್ರಜ್ಞಾನದ ಅಭಿವೃದ್ಧಿ ಜೊತೆಯಾಗಿ ಸಾಗಬೇಕಾಗಿದೆ. ಉತ್ತಮ ಆಡಳಿತದೊಂದಿಗೆ ಅಭಿವೃದ್ಧಿ ಚಟುವಟಿಕೆಗಳು ನಡೆದಾಗ ಜನರು ನೆಮ್ಮದಿಯಿಂದ ಇರಲು ಸಾಧ್ಯ''.

-ಸರ್ಬಾನಂದ ಸೋನೊವಾಲ್, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News