×
Ad

ಸುರಕ್ಷತಾ ಕ್ರಮಗಳಿಲ್ಲದೆ ಸ್ಫೋಟಕ ಹೊತ್ತ ವಾಹನಗಳ ಸಂಚಾರ

Update: 2021-09-25 23:52 IST

► ಇನ್ನೂ ತನಿಖೆ ಪೂರ್ಣಗೊಳ್ಳದ ಹುಣಸೋಡು ಸ್ಫೋಟ ಪ್ರಕರಣ

ಶಿವಮೊಗ್ಗ, : ಹುಣಸೋಡು ಸ್ಫೋಟದ ತನಿಖೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಶಿವಮೊಗ್ಗ ನಗರದಲ್ಲಿ ಸ್ಫೋಟಕ ಹೊತ್ತ ವಾಹನಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಸಂಚರಿಸುತ್ತಿರುವುದು ನಗರದಲ್ಲಿ ಆತಂಕ ಮೂಡಿಸಿದೆ.

 ಶಿವಮೊಗ್ಗ ನಗರದ ಹೊರವಲಯದಲ್ಲಿ ಶೈನ್ ಹೊಟೇಲ್ ಬಳಿ ಶನಿವಾರ ಲಾರಿಯೊಂದು ನಿಂತಿದೆ. ಸುಮಾರು 10 ಟನ್ ಸ್ಫೋಟಕ ಸಾಮಗ್ರಿ ತುಂಬಿದ್ದ ಲಾರಿಯ ಟಯರ್ ಪಂಕ್ಟರ್ ಆಗಿದ್ದು, ದುರಸ್ತಿಗಾಗಿ ಹಗಲಿಡೀ ಲಾರಿ ನಿಂತಿತ್ತು. ಆದರೆ ಪಂಕ್ಟರ್ ಹಾಕುವ ಹುಡುಗರಿಗೆ ಆ ಲಾರಿಯಲ್ಲಿ ಸ್ಫೋಟಕ ತುಂಬಿರುವುದು ಗೊತ್ತಿರಲಿಲ್ಲ. ಉಡುಪಿ ಜಿಲ್ಲೆಯ ಹೆಬ್ರಿಯಿಂದ ಸ್ಫೋಟಕ ತುಂಬಿಕೊಂಡು ಬಂದಿದ್ದ ಲಾರಿಯು ಪಂಕ್ಟರ್ ಹಾಕಿಸಲು ನಿಂತಿತ್ತು. ಸ್ಫೋಟಕ ಸಾಗಿಸುವ ಲಾರಿ ಜನನಿಬಿಡ ಪ್ರದೇಶದಲ್ಲಿ ನಿಲ್ಲಬಾರದೆಂಬ ನಿಯಮ ಇದೆ. ಸಾಗಿಸುವಾಗಲೇ ಸುರಕ್ಷತಾ ಕ್ರಮ ಅನುಸರಿಸಬೇಕು ಮತ್ತು ತಕ್ಕ ಸುರಕ್ಷತಾ ಬೆಂಗಾವಲು ಇರಬೇಕು. ಆದರೆ, ಇದ್ಯಾವ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂದುವರಿಯುತ್ತಿರುವ ಕಲ್ಲು ಗಣಿಕಾರಿಕೆ: ಹುಣಸೋಡು ಸ್ಫೋಟ ಪ್ರಕರಣದಲ್ಲಿ ಭಾರೀ ಅನಾಹುತ ಆಗಿದ್ದು, ಆರು ಮಂದಿ ಜೀವ ಕಳೆದುಕೊಂಡಿದ್ದರು. ಸ್ಥಳದಲ್ಲಿದ್ದರೆನ್ನಲಾದ ಇನ್ನಿಬ್ಬರು ವ್ಯಕ್ತಿಗಳ ಸುಳಿವೇ ಇಲ್ಲ ಎನ್ನಲಾಗಿದೆ. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ. ದೇಶವ್ಯಾಪಿ ಸುದ್ದಿಯಾಗಿ ಪ್ರಧಾನಿ ಯವರ ಗಮನ ಸೆಳೆದ ಈ ಪ್ರಕರಣ ನಡೆದ ಮೇಲೂ ಮಲೆನಾಡಿನಲ್ಲಿ ಸ್ಫೋಟಕ ಸಾಮಗ್ರಿಗಳ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಆಡಳಿತ ನಡೆಸುವ ಶಾಸಕರು ಮತ್ತು ಸಚಿವರು ಸ್ಥಗಿತಗೊಂಡ ಕಲ್ಲುಗಣಿ ಆರಂಭಿಸಬೇಕೆಂದು ಲಾಬಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇವೆ ಎಂದು ತಿಳಿದು ಬಂದಿದೆ.

 ಪ್ರತಿದಿನ ಶಿವಮೊಗ್ಗದ ನಗರದೊಳಗೆ 2 ರಿಂದ 3 ಲಾರಿಗಳು ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತವೆ ಎಂಬ ಮಾಹಿತಿ ಇದೆ. ಇದರ ಭಾಗವಾಗಿಯೇ ಸ್ಫೋಟಕ ತುಂಬಿದ ಲಾರಿ ನಗರದಲ್ಲಿ ನಿಂತಿತ್ತು. ಸ್ಫೋಟಕ ವಿಚಾರ ತಿಳಿಯುತ್ತಲೇ ಪಂಕ್ಟರ್ ಹಾಕುತ್ತಿದ್ದ ಹುಡುಗರು ಕೂಡ ಹೆದರಿ ದೂರ ಸರಿದಿದ್ದಾರೆ. ಲಾರಿಯಲ್ಲಿ ಕಾನೂನುಬದ್ಧ ಬಿಲ್‌ ಗಳಿದ್ದರೂ, ಚಾಲಕನ ಬಳಿ ಸ್ಫೋಟಕ ವಾಹನ ಚಲಾಯಿಸುವ ಪರವಾನಿಗೆ ಇರಲಿಲ್ಲ ಎನ್ನಲಾಗಿದೆ. ಪೊಲೀಸರಿಗೂ ಸ್ಫೋಟಕ ಸಾಗಾಟದ ಬಗ್ಗೆ ಮಾಹಿತಿಯಿರಲಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನೆರೆ ಜಿಲ್ಲೆಗಳಿಗೂ ಸಾಗಾಟ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಬೆಲ್‌ಟೆಕ್ ಕಂಪೆನಿಯಿಂದ ಸ್ಫೋಟಕಗಳನ್ನು ಹೊತ್ತ ಲಾರಿಗಳು ಪ್ರತಿದಿನ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಬೈಪಾಸ್ ರಸ್ತೆ ಮಾರ್ಗವಾಗಿ ಹೊಳೆಹೊನ್ನೂರು, ಚಿತ್ರದುರ್ಗ, ದಾವಣಗೆರೆಯ ಕ್ವಾರೆಗಳಿಗೆ ಪೂರೈಕೆಯಾಗುತ್ತಿದೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

ತನಿಖಾ ತಂಡ ರಚನೆ:

ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ ಪ್ರಶಾಂತ್ ಮುನ್ನೊಳ್ಳಿ , ಲಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಸ್ಫೋಟಕ ಸಾಗಣೆ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ಎಸ್ಪಿ ಲಕ್ಷ್ಮಿ ಪ್ರಸಾದ್ ತನಿಖಾ ತಂಡ ರಚಿಸಿ ಮಾಹಿತಿ ಕಲೆಹಾಕುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News