ಸೆ. 27ರಂದು ರೈತರಿಂದ ‘ಭಾರತ್ ಬಂದ್’

Update: 2021-09-25 18:29 GMT

ಹೊಸದಿಲ್ಲಿ, ಸೆ. 25: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ 10 ತಿಂಗಳು ಪೂರೈಸುವ ದಿನವಾದ ಸೆಪ್ಟಂಬರ್ 27ರಂದು ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

ಬಂದ್ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಸರಕಾರಿ, ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮುಚ್ಚಲಿವೆ. ಅಂಗಡಿಗಳು, ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಕೂಡ ಬಂದ್ ಆಗಲಿವೆ. ಆದರೆ, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಎಲ್ಲ ಅಗತ್ಯದ ಸೇವೆಗಳು, ತುರ್ತು ಸಂಸ್ಥಾಪನೆಗಳಿಗೆ ಹಾಗೂ ವೈಯುಕ್ತಿಕ ತುರ್ತಿನ ಹಿನ್ನೆಲೆಯಲ್ಲಿ ತೆರಳುವವರಿಗೆ ವಿನಾಯತಿ ನೀಡಲಾಗಿದೆ. ಬಂದ್ ಸ್ವಯಂ ಪ್ರೇರಿತವಾಗಿ ಹಾಗೂ ಶಾಂತಿಯುತವಾಗಿ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭರವಸೆ ನೀಡಿದೆ.

ಹಲವು ಪ್ರತಿಪಕ್ಷಗಳು ಬಂದ್ ಅನ್ನು ಬೆಂಬಲಿಸಿವೆ. ಕಾಂಗ್ರೆಸ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ 7 ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ವ್ಯವಸ್ಥಿತ ಹಾನಿ ಉಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಹೇಳಿದ್ದಾರೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ರೈತರ ಬೇಡಿಕೆ ಕುರಿತಂತೆ ಮಾತುಕತೆ ನಡೆಸುವಂತೆ ಹಾಗೂ ಬಿಕ್ಕಟ್ಟಿಗೆ ಕಾರಣವಾದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಅದು ಕೇಂದ್ರ ಸರಕಾರದಲ್ಲಿ ಮನವಿ ಮಾಡಿದೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಬಂದ್‌ಗೆ ಬೆಂಬಲ ನೀಡಿದ್ದಾರೆ.

ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಟ್ವೀಟ್‌ನಲ್ಲಿ ತಮ್ಮ ನಿವಾಸದಲ್ಲಿ ಏರ್ಪಡಿಸಲಾದ ಮಹಾ ಮೈತ್ರಿಯ ನಾಯಕರ ಸಭೆಯಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಸೆಪ್ಟಂಬರ್ 27ರಂದು ನಡೆಯಲಿರುವ ಭಾರತ್ ಬಂದ್‌ಗೆ ಸರ್ವಸಮ್ಮತವಾಗಿ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಕೇರಳದ ಆಡಳಿತಾರೂಢ ಎಲ್‌ಡಿಎಫ್ ಸೆಪ್ಟಂಬರ್ 27ರಂದು ರಾಜ್ಯ ವ್ಯಾಪಿ ಹರತಾಳಕ್ಕೆ ಕರೆ ನೀಡಿದೆ. ತಿರುವನಂತಪುರದಲ್ಲಿ ನಡೆದ ಆಡಳಿತಾರೂಢ ಮೈತ್ರಿ ಪಕ್ಷಗಳ ಸಭೆಯ ಬಳಿಕ ಎಲ್‌ಡಿಎಫ್‌ನ ಸಂಚಾಲಕ ಹಾಗೂ ಸಿಪಿಎಂನ ಕಾರ್ಯನಿರತ ಕಾರ್ಯದರ್ಶಿ ಎ. ವಿಜಯ್ ಹರತಾಳದ ಘೋಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News