ಮಗ ಮೃತಪಟ್ಟ ಬಳಿಕದ ಪರಿಹಾರ ಹಣವನ್ನು ಬಡ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಬಳಸಲು ದಂಪತಿ ತೀರ್ಮಾನ

Update: 2021-09-26 13:19 GMT
ಸಾದರ್ಭಿಕ ಚಿತ್ರ

ಥಾಣೆ: 2018ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಅಪಘಾತದಲ್ಲಿ ತಮ್ಮ 21 ರ ಹರೆಯದ ಮಗನನ್ನು ಕಳೆದುಕೊಂಡಿದ್ದ ದಂಪತಿಗಳು ಇದೀಗ ಮಾದರಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಬಳಿಕ ಸಿಕ್ಕಿದ 27.30 ಲಕ್ಷ ರೂ. ಪರಿಹಾರ ಮೊತ್ತವನ್ನು ಬಡ, ನಿರ್ಗತಿಕ ಮತ್ತು ಬುಡಕಟ್ಟು ಮಕ್ಕಳ ಶಿಕ್ಷಣ ಹಾಗೂ ಇತರ ಮೂಲಭೂತ ಸೌಕರ್ಯಗಳಿಗಾಗಿ ಬಳಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಥಾಣೆ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ (MACT) ಶುಕ್ರವಾರದಂದು ಈ ದಂಪತಿಗಳು ತಮ್ಮ ಮಗನ ಸಾವಿಗೆ 50ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಆಲಿಸಿತು.

ಅವರ ಪುತ್ರ ನೆರೆಯ ಮುಂಬೈನ ಈಸ್ಟರ್ನ್‌ ಎಕ್ಸ್‌ ಪ್ರೆಸ್‌ ಹೆದ್ದಾರಿಯ ಬಂಡುಪ್‌ ಪ್ರದೇಶದಲ್ಲಿ ಮೃತಪಟ್ಟಿದ್ದ. ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಮಾರ್ಗದ ಇನ್ನೊಂದು ಬದಿಗೆ ಹಾರಿ ಅಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಕಂಟೈನರ್‌ ಗೆ ಢಿಕ್ಕಿಯಾಗಿತ್ತು. ಈ ವೇಳೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ. 

ಪರಿಹಾರ ಅರ್ಜಿಯ ಕುರಿತಾದಂತೆ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಆರ್‌.ಎನ್‌ ರೋಖಡೆ ಅವರ ಮಧ್ಯಪ್ರವೇಶದ ಬಳಿಕ 27.30 ಲಕ್ಷ ರೂ. ಪರಿಹಾರಕ್ಕಾಗಿ ಪೋಷಕರಿಬ್ಬರೂ ಒಪ್ಪಿದರು ಎಂದು ವರದಿ ತಿಳಿಸಿದೆ. ದಂಪತಿಗಳನ್ನು ಪ್ರತಿನಿಧಿಸಿದ ವಕೀಲ ಪ್ರದೀಪ್ ಟಿಲ್ಲು, "ಅವರು ತಮ್ಮ ಮಗನ ನೆನಪಿನಲ್ಲಿ ಟ್ರಸ್ಟ್ ಸೃಷ್ಟಿಸಿದ್ದಾರೆ ಮತ್ತು ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಲು ಮೊತ್ತವನ್ನು ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

"ನಿಸ್ಸಂದೇಹವಾಗಿ, ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದಕ್ಕೆ ನಮಗೆ ದುಃಖವಿದೆ, ಆದರೆ ಅದೇ ಸಮಯದಲ್ಲಿ ನಾವು ಸಮಾಜಕ್ಕೆ ನಮ್ಮಿಂದಾಗುವಷ್ಟು ಮರಳಿ ನೀಡಲು ಬಯಸುತ್ತೇವೆ ಮತ್ತು ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಲು ಟ್ರಸ್ಟ್ ಅನ್ನು ಸ್ಥಾಪಿಸಿದ್ದೇವೆ." ಎಂದರು. ಮಗ ಮರಣ ಹೊಂದಿದ್ದ ವೇಳೆ ದಂಪತಿ ಮಗನ ಕಣ್ಣನ್ನೂ ದಾನ ಮಾಡಿ ಮಾದರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News