ಉತ್ತರಪ್ರದೇಶ: ನಿರುದ್ಯೋಗದ ವಿರುದ್ಧ ಯುವಸಂಘಟನೆಗಳ ಪ್ರತಿಭಟನೆ, ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗೆ ಆಗ್ರಹ

Update: 2021-09-26 13:46 GMT

ಲಕ್ನೋ,ಸೆ.26: ಛಾತ್ರ ಯುವ ರೋಜಗಾರ್ ಅಧಿಕಾರ ಮಂಚ್ ನ ಆಶ್ರಯದಲ್ಲಿ ವಿವಿಧ ವಿದ್ಯಾರ್ಥಿ ಮತ್ತು ಯುವಸಂಘಟನೆಗಳು ಶುಕ್ರವಾರ ಲಕ್ನೋದಲ್ಲಿ ಆಯೋಜಿಸಲಾಗಿದ್ದ ರೋಜಗಾರ್ ಅಧಿಕಾರ ಸಮ್ಮೇಳನದಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಪ್ರತಿಭಟನೆಗೆ ಚಾಲನೆ ನೀಡಿದ್ದು, ರಾಜ್ಯದಲ್ಲಿ ಖಾಲಿಯಿರುವ 25 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದಿತ್ಯನಾಥ ನೇತೃತ್ವದ ಸರಕಾರವನ್ನು ಆಗ್ರಹಿಸಿವೆ.

ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ನಿರುದ್ಯೋಗ ಮತ್ತು ಖಾಸಗೀಕರಣದ ವಿರುದ್ಧ ಆಂದೋಲನವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಹಲವಾರು ಪ್ರತಿಪಕ್ಷ ನಾಯಕರು ‘ಘನತೆಯೊಂದಿಗೆ ಉದ್ಯೋಗ’ವನ್ನು ವಿದ್ಯಾವಂತ ಯುವಜನತೆಯ ಹಕ್ಕನ್ನಾಗಿ ಘೋಷಿಸುವಂತೆ ಬಿಜೆಪಿ ಸರಕಾರವನ್ನು ಆಗ್ರಹಿಸಿದರು.

ಸಾಮಾಜಿಕ ಆಂದೋಲನಗಳ ವಿರುದ್ಧ ಉ.ಪ್ರ.ಸರಕಾರದ ದಮನಕಾರಿ ನೀತಿಗಳನ್ನು ಖಂಡಿಸಿದ ಸಿಪಿಐ (ಎಂಎಲ್) ಶಾಸಕ ಮನೋಜ ಮಂಝಿಲ್ ಅವರು,ರಾಜ್ಯದಲ್ಲಿ ನಿರುದ್ಯೋಗ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದಲ್ಲಿಯ ಒಟ್ಟು ನಿರುದ್ಯೋಗಿ ಯುವಜನರ ಪೈಕಿ ಶೇ.10ರಷ್ಟು ಈ ರಾಜ್ಯದಲ್ಲಿದ್ದಾರೆ. ಕೋವಿಡ್ ಲಾಕ್ಡೌನ್ಗಳ ಸಂದರ್ಭದಲ್ಲಿ ಭಾರೀ ಸಂಖ್ಯೆಯ ಜನರು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ʼಆಂದೋಲನಕ್ಕೆ ಬೆಂಬಲವನ್ನು ಘೋಷಿಸಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ರಾಷ್ಟ್ರೀಯ ಸಂಯೋಜಕಿ ಸದಫ್ ಜಾಫರ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ಯುವಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಮರ್ಥ್ಯವಿಲ್ಲದಿದ್ದರೆ ಅವರು ತಮ್ಮ ಹುದ್ದೆಗಳಿಂದ ಕೆಳಗಿಳಿಯಬೇಕು ಎಂದು ಹೇಳಿದರು.

ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್ಎ)ದ ಅಧ್ಯಕ್ಷ ಹಾಗೂ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಅವರು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವಂತೆ ಕರೆ ನೀಡಿದರು.

2016-2019ರ ಅವಧಿಯಲ್ಲಿ ಭಾರತದಲ್ಲಿ ನಿರುದ್ಯೋಗದಿಂದಾಗಿ ಆತ್ಮಹತ್ಯೆಗಳ ಸಂಖ್ಯೆ ಶೇ.24ರಷ್ಟು ಏರಿಕೆಯಾಗಿದೆ ಎಂದು ಬೆಟ್ಟು ಮಾಡಿದ ಅವರು ರಾಜ್ಯದಲ್ಲಿ ನಿರುದ್ಯೋಗ ದರ ಗಣನೀಯವಾಗಿ ಕಡಿಮೆಯಾಗಿದೆ ಎಂಬ ಆದಿತ್ಯನಾಥರ ಹೇಳಿಕೆಯನ್ನು ಉಲ್ಲೇಖಿಸಿ, ಸರಕಾರವು ಸುಳ್ಳು ಅಂಕಿಅಂಶಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ರಾಜ್ಯದಲ್ಲಿ ನಿರುದ್ಯೋಗ ಬಿಕ್ಕಟ್ಟು ಹೆಚ್ಚಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಅಂಕಿಅಂಶಗಳಂತೆ ಎಲ್ಲ ರಾಜ್ಯಗಳ ಪೈಕಿ ಉ.ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ (1,11,865) ಪೊಲೀಸ್ ಹುದ್ದೆಗಳು ಖಾಲಿಯಿವೆ. ಲೆಕ್ಕಾಚಾರಗಳಂತೆ ರಾಜ್ಯದಲ್ಲಿ ಸುಮಾರು 25 ಲ.ಖಾಲಿಹುದ್ದೆಗಳು ಇನ್ನೂ ಭರ್ತಿಯಾಗಬೇಕಿವೆ. ಅವುಗಳ ಭರ್ತಿಗೆ ಸರಕಾರವು ತಕ್ಷಣ ಕ್ರಮವನ್ನು ಕೈಗೊಳ್ಳಬೇಕಿದೆ ಎಂದರು. 2017ರ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿಯು ರಾಜ್ಯದಲ್ಲಿ 70 ಲ.ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನೀಡಿತ್ತು,ಆದರೆ ಅದು ಕೇವಲ ನಾಲ್ಕು ಲ.ಜನರಿಗೆ ಉದ್ಯೋಗಳನ್ನು ನೀಡಿದೆ ಎಂದು ಬಾಲಾಜಿ ಬೆಟ್ಟುಮಾಡಿದರು.

ಆಂದೋಲನದ ಅಂಗವಾಗಿ ಛಾತ್ರ ಯುವ ರೋಜಗಾರ್ ಅಧಿಕಾರ ಮಂಚ್ ಸೆ.28ರಂದು ಭಗತ್ ಸಿಂಗ್ ಜನ್ಮದಿನವನ್ನು ‘ಉದ್ಯೋಗ ಹಕ್ಕುಗಳ ದಿನ’ವನ್ನಾಗಿ ಆಚರಿಸಲಿದೆ. ರಾಜ್ಯಾದ್ಯಂತ ಆಂದೋಲನವನ್ನು ತೀವ್ರಗೊಳಿಸಲು ವಿವಿಧ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ 10,000 ಸ್ವಯಂಸೇವಕರನ್ನು ಸೇರಿಸಿಕೊಳ್ಳಲು ಹಾಗು ಅ.20 ಮತ್ತು ಅ.30ರ ನಡುವೆ ವಿವಿಧ ನಗರಗಳಲ್ಲಿ ರ್ಯಾಲಿಗಳನ್ನು ಆಯೋಜಿಸಲು ಮೋರ್ಚಾ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News