ಮತಗಳಿಗಾಗಿ ʼರಾಜಾ ಮಿಹಿರ ಭೋಜʼನ ಜಾತಿಯನ್ನು ಬದಲಿಸಿದ ಆದಿತ್ಯನಾಥ್: ಅಖಿಲೇಶ್ ಯಾದವ್‌ ಆರೋಪ

Update: 2021-09-26 14:23 GMT

ಲಕ್ನೋ,ಸೆ.26: ಬಿಜೆಪಿಯು ನಿರ್ದಿಷ್ಟ ಸಮುದಾಯವೊಂದರ ಮತಗಳನ್ನು ಗಳಿಸಲು ಒಂಭತ್ತನೇ ಶತಮಾನದ ರಾಜಾ ಮಿಹಿರ ಭೋಜʼ ನ ಜಾತಿಯನ್ನು ಬದಲಿಸಿದೆ ಮತ್ತು ಐತಿಹಾಸಿಕ ಸತ್ಯಗಳನ್ನು ತಿರುಚುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಅವರು ರವಿವಾರ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇತ್ತೀಚಿಗೆ ಗೌತಮ ಬುದ್ಧ ನಗರದ ದಾದ್ರಿಯಲ್ಲಿ ರಾಜಾ ಮಿಹಿರ ಭೋಜನ 15 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಇದು ರಾಜನ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಗುರ್ಜರ್ ಮತ್ತು ರಜಪೂತ ಸಮುದಾಯಗಳ ಮಧ್ಯೆ ವಿವಾದವನ್ನು ಸೃಷ್ಟಿಸಿದೆ.

‘ಮಿಹಿರ ಭೋಜ ಗುರ್ಜರ್-ಪ್ರತಿಹಾರ ಸಮುದಾಯದವನು ಎಂದು ಚರಿತ್ರೆಯಲ್ಲಿ ಬೋಧಿಸಲಾಗಿದೆ. ಆದರೆ ಬಿಜೆಪಿಯವರು ಆತನ ಜಾತಿಯನ್ನು ಬದಲಿಸಿದ್ದಾರೆ. ಇದು ಖಂಡನೀಯವಾಗಿದೆ. ನಿರ್ದಿಷ್ಟ ಸಮುದಾಯವೊಂದರ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಉದ್ದೇಶಪೂರ್ವಕವಾಗಿ ಐತಿಹಾಸಿಕ ಸತ್ಯಗಳನ್ನು ತಿರುಚಲು ಮತ್ತು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ’ ಎಂದು ಟ್ವೀಟಿಸಿರುವ ಯಾದವ್, ತನ್ನ ಪಕ್ಷವು ಸಮಾಜದ ಎಲ್ಲ ವರ್ಗಗಳಿಗೆ ಗೌರವಕ್ಕಾಗಿ ಕಟಿಬದ್ಧವಾಗಿದೆ ಎಂದಿದ್ದಾರೆ.

ಸೆ.22ರಂದು ಪ್ರತಿಮೆ ಅನಾವರಣದ ಬಳಿಕ ಮಾತನಾಡಿದ ಆದಿತ್ಯನಾಥ,ರಾಜಾ ಮಿಹಿರ ಭೋಜನ ಆಡಳಿತದ ಸಂದರ್ಭ ಭಾರತದಲ್ಲಿ ನುಗ್ಗಲು ಯಾವುದೇ ವಿದೇಶಿ ದೊರೆಗಳಿಗೆ ಸಾಧ್ಯವಾಗಿರಲಿಲ್ಲ. ರಾಜನ ಬಗ್ಗೆ ಅವರಿಗೆ ಎಷ್ಟೊಂದು ಭೀತಿಯಿತ್ತೆಂದರೆ ಆತನ ಆಡಳಿತದ 150 ವರ್ಷಗಳ ಬಳಿಕವೂ ಮುಹಮ್ಮದ್ ಘಝ್ನವಿ ದೇಶವನ್ನು ಆಕ್ರಮಿಸಿ ಕೊಳ್ಳೆ ಹೊಡೆಯುವವರೆಗೂ ಭಾರತದ ಮೇಲೆ ದಾಳಿ ಮಾಡಲು ಯಾರೂ ಧೈರ್ಯ ಮಾಡಿರಲಿಲ್ಲ ಎಂದು ಹೇಳಿದ್ದರು.

‘ತನ್ನ ಗತಕಾಲ ಮತ್ತು ಸಂಪ್ರದಾಯಗಳನ್ನು ಮರೆಯುವ ಸಮುದಾಯಕ್ಕೆ ತನ್ನ ಭೌಗೋಳಿಕತೆಯನ್ನು ಸಹ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಮ್ಮಿಂದಿಗೂ ಇಂತಹುದೇ ಆಗಿದೆ ’ಎಂದು ಆದಿತ್ಯನಾಥ್ ಹೇಳಿದ್ದರು. ಇದರ ಬೆನ್ನಿಗೇ ದಾದ್ರಿಯಲ್ಲಿನ ಗುರ್ಜರ್ ಮತ್ತು ರಜಪೂತ ಸಮುದಾಯಗಳ ನಡುವೆ ರಾಜನ ಪರಂಪರೆಯ ಬಗ್ಗೆ ವಿವಾದ ಸೃಷ್ಟಿಯಾಗಿದ್ದು, ರಾಜ ತಮ್ಮ ಸಮುದಾಯಕ್ಕೆ ಸೇರಿದವನು ಎಂದು ಉಭಯ ಗುಂಪುಗಳು ಕಚ್ಚಾಡಿಕೊಳ್ಳುತ್ತಿವೆ.

ಸ್ಥಳೀಯ ಸಮುದಾಯವೊಂದರ ನಾಯಕನೋರ್ವ ಪ್ರತಿಮೆಯ ಬುನಾದಿಯ ಶಿಲಾಫಲಕವನ್ನು ವಿರೂಪಗೊಳಿಸಿ ರಾಜನ ಹೆಸರಿನಲ್ಲಿಯ ಪೂರ್ವಪ್ರತ್ಯಯವನ್ನು ಬದಲಿಸಿದ್ದನ್ನು ತೋರಿಸುವ ವೀಡಿಯೊವೊಂದು ಬಳಿಕ ಬಹಿರಂಗಗೊಂಡಿತ್ತು. ಉಭಯ ಸಮುದಾಯಗಳ ನಡುವಿನ ಬಿರುಕನ್ನು ಗಮನಿಸಿದ್ದ ಆದಿತ್ಯನಾಥ,ಆದರ್ಶ ವ್ಯಕ್ತಿಗಳನ್ನು ಜಾತಿಯ ಚೌಕಟ್ಟುಗಳಲ್ಲಿ ಸೀಮಿತಗೊಳಿಸದಂತೆ ಸೂಚಿಸಿದ್ದರಲ್ಲದೆ,ಅವರ ತ್ಯಾಗಗಳು ಇಡೀ ದೇಶಕ್ಕೇ ಸ್ಮರಣೀಯವಾಗಿವೆ ಎಂದು ಹೇಳಿದ್ದರು.

ಮಾ ಪನ್ನಾ ದಾಯಿ ತನ್ನ ಮಗನ ಜೀವವನ್ನು ಬಲಿ ನೀಡಿ ಮಹಾರಾಣಾನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಳು. ಗುರ್ಜರ್ ಸಮುದಾಯ ಮಾತ್ರವಲ್ಲ,ಸಮಗ್ರ ಭಾರತವೇ ಆಕೆಯ ಮಹಾನ್ ತ್ಯಾಗದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಿದೆ ಎಂದು ಆದಿತ್ಯನಾಥ್ ಟ್ವೀಟ್ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News