ಪ್ರತಿಯೊಬ್ಬ ಭಾರತೀಯನಿಗೆ ಆರೋಗ್ಯ ಗುರುತುಪತ್ರ, ಡಿಜಿಟಲ್ ರೂಪದಲ್ಲಿ ದಾಖಲೆಗಳು ಸುರಕ್ಷಿತ :ಪ್ರಧಾನಿ ಮೋದಿ

Update: 2021-09-27 17:55 GMT

ಹೊಸದಿಲ್ಲಿ,ಸೆ.27: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ತನ್ನ ಸ್ವಾತಂತ್ಯ ದಿನದ ಭಾಷಣದಲ್ಲಿ ಪ್ರಕಟಿಸಿದ್ದ ಆಯುಷ್ಮಾನ್ ಭಾರತ ಡಿಜಿಟಲ್ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದರು.

ಆಯುಷ್ಮಾನ್ ಭಾರತ ಡಿಜಿಟಲ್ ಅಭಿಯಾನವು ದೇಶಾದ್ಯಂತದ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಸೇವೆಗಳನ್ನು ಪರಸ್ಪರ ಸಂಪರ್ಕಿಸಲಿದೆ ಎಂದು ತನ್ನ ವರ್ಚುವಲ್ ಭಾಷಣದಲ್ಲಿ ತಿಳಿಸಿದ ಮೋದಿ,ಯೋಜನೆಯಡಿ ಪ್ರತಿ ಭಾರತೀಯನಿಗೂ ಡಿಜಿಟಲ್ ಆರೋಗ್ಯ ಐಡಿಯನ್ನು ಒದಗಿಸಲಾಗುವುದು. ಪ್ರತಿಯೊಬ್ಬ ಪ್ರಜೆಯ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗುವುದು ಎಂದು ಹೇಳಿದರು.

ಯೋಜನೆಯಡಿ ನಾಗರಿಕರು ಪಡೆಯುವ ಹೆಲ್ತ್ ಐಡಿ ಆರೋಗ್ಯ ಖಾತೆಯಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಇದಕ್ಕೆ ವೈದ್ಯಕೀಯ ದಾಖಲೆಗಳನ್ನು ಜೋಡಣೆಗೊಳಿಸಬಹುದಾಗಿದೆ.

ಸರ್ವಾಂಗೀಣ ಮತ್ತು ಅಂತರ್ಗತ ಆರೋಗ್ಯ ರಕ್ಷಣೆ ಮಾದರಿಯನ್ನು ರೂಪಿಸಲು ಭಾರತವು ಪ್ರಯತ್ನಿಸುತ್ತಿದೆ ಮತ್ತು ಈ ಮಾದರಿಯು ರೋಗಗಳ ತಡೆಗೆ ಒತ್ತು ನೀಡುತ್ತದೆ ಎಂದ ಮೋದಿ ಅವರು,ಆರೋಗ್ಯ ರಕ್ಷಣೆ ಸೇವೆಗಳು ಅಗ್ಗವಾಗಿರಬೇಕು ಮತ್ತು ಎಲ್ಲರಿಗೂ ದೊರೆಯುವಂತಿರಬೇಕು ಎಂದರು. ಆಯುಷ್ಮಾನ್ ಭಾರತ ಡಿಜಿಟಲ್ ಅಭಿಯಾನವು ಬಡ ಮತ್ತು ಮಧ್ಯಮ ವರ್ಗದ ಜನರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲಿದೆ ಎಂದ ಅವರು, ದೇಶಾದ್ಯಂತ ರೋಗಿಗಳನ್ನು ಆಸ್ಪತ್ರೆಗಳೊಂದಿಗೆ ಸಂಪರ್ಕಿಸುವಲ್ಲಿ ಆಯುಷ್ಮಾನ್ ಭಾರತ ಮಾಡಿರುವ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ ಮತ್ತು ಪ್ರಬಲ ತಂತ್ರಜ್ಞಾನ ವೇದಿಕೆಯನ್ನು ಒದಗಿಸಲಾಗುತ್ತಿದೆ ಎಂದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೊಡುಗೆ ಸಲ್ಲಿಸಿದ್ದಕ್ಕಾಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಪ್ರಧಾನಿ,ಲಸಿಕೆ ನೀಡಿಕೆಯಾಗಿರಲಿ ಅಥವಾ ಕೋವಿಡ್ ರೋಗಿಗಳ ಚಿಕಿತ್ಸೆಯಾಗಲಿ,ಅವರ ಪ್ರಯತ್ನಗಳು ದೇಶಕ್ಕೆ ಬೃಹತ್ ನೆಮ್ಮದಿಯನ್ನು ಒದಗಿಸಿವೆ ಎಂದರು.

ಲಸಿಕೆಗೆ ನೋಂದಾವಣೆಯಿಂದ ಹಿಡಿದು ಪ್ರಮಾಣೀಕರಣದವರೆಗೆ ಕೋವಿಡ್ ನಿರ್ವಹಣೆಯಲ್ಲಿ ಕೋವಿನ್ ಪೋರ್ಟಲ್ನ ಪಾತ್ರವನ್ನೂ ಅವರು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News