ಅಮೆಝಾನ್‌ ʼಈಸ್ಟ್‌ ಇಂಡಿಯಾ ಕಂಪೆನಿ 2.Oʼ ಎಂದ ಆರೆಸ್ಸೆಸ್‌ ಸಂಯೋಜಿತ ಪಾಂಚಜನ್ಯ ಪತ್ರಿಕೆ

Update: 2021-09-27 07:55 GMT

ಹೊಸದಿಲ್ಲಿ: ಆರೆಸ್ಸೆಸ್ ಸಂಯೋಜಿತ ಮ್ಯಾಗಜೀನ್ ಪಾಂಚಜನ್ಯ ಅಕ್ಟೋಬರ್ 3ರಂದು ಬಿಡುಗಡೆಗೊಳ್ಳಲಿರುವ ತನ್ನ ಲೇಟೆಸ್ಟ್ ಸಂಚಿಕೆಯಲ್ಲಿನ ಮುಖಪುಟ ಲೇಖನದಲ್ಲಿ ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೆಝಾನ್ ಅನ್ನು ಟಾರ್ಗೆಟ್ ಮಾಡಿದೆಯಲ್ಲದೆ ಸಂಸ್ಥೆಯನ್ನು "ಈಸ್ಟ್ ಇಂಡಿಯಾ ಕಂಪೆನಿ 2.0" ಎಂದು ಬಣ್ಣಿಸಿದೆ.

ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್ ಈ ಮುಖಪುಟ ಲೇಖನದ ಇಮೇಜ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಇಮೇಜ್‍ನಲ್ಲಿ ಅಮೆಝಾನ್ ಸಿಇಒ ಜೆಫ್ ಬೆಝೋಸ್ ಅವರ ಚಿತ್ರವೂ ಇದೆ.

ಇತ್ತೀಚೆಗಷ್ಟೇ ಪಾಂಚಜನ್ಯ, ನೂತನ ಐಟಿ ವೆಬ್ ತಾಣದಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಇನ್ಫೋಸಿಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡಿತ್ತೆನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಆದರೆ ಆರೆಸ್ಸೆಸ್ ಈ ನಿರ್ದಿಷ್ಟ ವಿವಾದದಿಂದ ದೂರ ಸರಿದು ನಿಂತಿತ್ತು.

ಇದೀಗ ತನ್ನ ಲೇಟೆಸ್ಟ್ ಸಂಚಿಕೆಯಲ್ಲಿ ಅಮೆಝಾನ್ ಕಾನೂನು ಅಧಿಕಾರಿಗಳು ಭಾರತ ಸರಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆನ್ನಲಾದ ಆರೋಪಗಳನ್ನು ಉಲ್ಲೇಖಿಸಲಾಗಿದೆ. "ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಲು ಅದು (ಕಂಪೆನಿ) ಯಾವ ತಪ್ಪು ಮಾಡಿದೆ" ಎಂದು ಲೇಖನ ಪ್ರಶ್ನಿಸಿದೆಯಲ್ಲದೆ "ಈ ಕಂಪೆನಿಯು ದೇಶೀಯ ಉದ್ಯಮಶೀಲತೆಗೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಂಸ್ಕೃತಿಗೆ ಒಂದು ಬೆದರಿಕೆ ಎಂದು ಜನರು ಏಕೆ ತಿಳಿದುಕೊಳ್ಳುತ್ತಾರೆ?" ಎಂದು ಪ್ರಶ್ನಿಸಿದೆ.

ಕಳದೆ ವಾರ ದಿ ಮಾರ್ನಿಂಗ್ ಕಾಂಟೆಕ್ಸ್ಟ್ ತನ್ನ ವರದಿಯೊಂದರಲ್ಲಿ ಒಬ್ಬರು  ಮಾಡಿದ ಆರೋಪವನ್ನು ಉಲ್ಲೇಖಿಸಿತ್ತಲ್ಲದೆ ಈ ಆರೋಪದ ಪ್ರಕಾರ ಅಮೆಝಾನ್ ತನ್ನ ಕಾನೂನು ಪ್ರತಿನಿಧಿಗೆ ನೀಡಿದ ಶುಲ್ಕವನ್ನು ಬಳಸಿ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದೆ. ಆದರೆ ತಾನು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಮೆಝಾನ್ ಸ್ಪಷ್ಟಪಡಿಸಿತ್ತು.

ಇದೀಗ ಪಾಂಚಜನ್ಯ ತನ್ನ ಲೇಖನದಲ್ಲಿ, ತನ್ನ ಪರವಾಗಿ ನೀತಿಗಳನ್ನು ಹೊಂದಲು ಅಮೆಝಾನ್ ಕೋಟ್ಯಂತರ ರೂಪಾಯಿ ವಿತರಿಸಿದೆ ಎಂದು ವರದಿಗಳು ಹೇಳುತ್ತವೆ, ಎಂದು ಆರೋಪಿಸಿದೆ.

"ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪಿಸಲು ಅಮೆಝಾನ್ ಇಚ್ಛಿಸಿದೆ, ಇದಕ್ಕಾಗಿ ಭಾರತೀಯ ನಾಗರಿಕರ ಆರ್ಥಿಕ, ರಾಜಕೀಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಹಾಗೂ ಅಮೆಝಾನ್ ಒಡೆತನದ ಪ್ರೈಮ್ ವೀಡಿಯೋ ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಟಿವಿ ಸರಣಿಗಳು ಹಾಗೂ ಸಿನೆಮಾಗಳನ್ನು ಪ್ರದರ್ಶಿಸುತ್ತಿದೆ" ಎಂದು ಪಾಂಚಜನ್ಯದ ಲೇಖನ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News