"ಸಿಎಂ ಆದ ಬಳಿಕ ಪ್ರಧಾನಿಯಾದ ಏಕೈಕ ನಾಯಕ ಮೋದಿ" ಎಂದು ನಗೆಪಾಟಲಿಗೀಡಾದ ಸುಶೀಲ್‌ ಕುಮಾರ್‌ ಮೋದಿ !

Update: 2021-09-27 12:10 GMT

ಹೊಸದಿಲ್ಲಿ: ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾದ ಏಕೈಕ ನಾಯಕ ನರೇಂದ್ರ ಮೋದಿ ಎಂದು ಹೇಳಿದ್ದಕ್ಕಾಗಿ ಬಿಜೆಪಿ ಸಂಸದ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನೆಟ್ಟಿಗರಿಂದ ತರಾಟೆಗೆ ಒಳಗಾಗಿದ್ದಾರೆ.

ಸೆಪ್ಟೆಂಬರ್ 17ರಂದು ಪ್ರಧಾನಿಯ ಹುಟ್ಟುಹಬ್ಬದ  ಆಚರಣೆಗೆ  ಸಂಬಂಧಿಸಿದಂತೆ ಪಕ್ಷದ ನಿರ್ಧಾರ ಕುರಿತಂತೆ ಮಾಹಿತಿಯನ್ನು ಇತ್ತೀಚೆಗೆ ನೀಡುವ ಸಂದರ್ಭ ಸುಶೀಲ್ ಕುಮಾರ್ ಈ ಹೇಳಿಕೆ ನೀಡಿದ್ದರು. "ಇಲ್ಲಿ ಕುಳಿತಿರುವ ಜನರಿಗೆ ತಿಳಿದಿರಲಿಕ್ಕಿಲ್ಲ. ಪ್ರಧಾನಿ ಮೋದಿ ಅವರು ಗುಜರಾತ್ ಸೀಎಂ ಆಗಿ 13 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರು ನಂತರ ದೇಶದ ಪ್ರಧಾನಿಯಾದರು. ಪ್ರಧಾನಿಯಾಗಿ ಅವರು ಇಲ್ಲಿಯ ತನಕ ಏಳು ವರ್ಷ ಸೇವೆ ಸಲ್ಲಿಸಿದ್ದಾರೆ. ಇದರರ್ಥ ಅವರು ಕಳೆದ 20 ವರ್ಷಗಳಿಂದ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯಾನಂತರ  ಮುಖ್ಯಮಂತ್ರಿಯೂ ಆಗಿ ನಂತರ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಯಾವುದೇ  ನಾಯಕನಿಲ್ಲ. ನರೇಂದ್ರ ಮೋದಿ ಒಬ್ಬರೇ, ಅವರು ಸೀಎಂ ಆಗಿದ್ದಾಗ ಗುಜರಾತ್ ಅನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಿದರು ಹಾಗೂ ಈಗ ಪ್ರಧಾನಿಯಾದ ನಂತರ ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ" ಎಂದು ಅವರು ಹೇಳಿದ್ದರು.

ತಮ್ಮ ಭಾಷಣದ ವೀಡಿಯೋವನ್ನೂ ಅವರು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಇದು ತಪ್ಪು ಎಂದು ಹಲವು ನೆಟ್ಟಿಗರು ಅವರಿಗೆ ತಿಳಿಹೇಳಿದ್ದಾರೆ.

ಸರಕಾರಿ ವೆಬ್‍ಸೈಟ್‍ನಲ್ಲಿಯೇ ಇರುವ ಮಾಹಿತಿಯಂತೆ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದ ಮೊದಲ ಪ್ರಧಾನಿ ಮೊರಾರ್ಜಿ ದೇಸಾಯಿ ಆಗಿದ್ದರು. ಅವರು 1952ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಸೀಎಂ ಆಗಿದ್ದರೆ 1977ರಲ್ಲಿ ಪ್ರಧಾನಿಯಾಗಿದ್ದರು.

ಉತ್ತರ ಪ್ರದೇಶ ಸೀಎಂ ಆಗಿ 1967 ಹಾಗೂ ನಂತರ 1970ರಲ್ಲಿ ಸೇವೆ ಸಲ್ಲಿಸಿದ್ದ ಚರಣ್ ಸಿಂಗ್ 1979ರಲ್ಲಿ ಪ್ರಧಾನಿಯಾಗಿದ್ದರು. 1980ರಲ್ಲಿ ಉತ್ತರ ಪ್ರದೇಶ ಸೀಎಂ ಆಗಿದ್ದ ವಿಪಿ ಸಿಂಗ್ 1989ರಲ್ಲಿ ದೇಶದ ಪ್ರಧಾನಿಯಾದರು.  ಆಂಧ್ರ ಸೀಎಂ ಆಗಿ 1971ರಿಂದ 1973 ತನಕ ಸೇವೆ ಸಲ್ಲಿಸಿದ್ದ ಪಿವಿ ನರಸಿಂಹ ರಾವ್ 1991ರಿಂದ 1996 ತನಕ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರೆ 1994ರಲ್ಲಿ ಕರ್ನಾಟಕ ಸೀಎಂ ಆಗಿದ್ದ ದೇವೇಗೌಡ 1996ರಲ್ಲಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News