ಉ.ಪ್ರ.: ಸರಕಾರಿ ಶಾಲೆಯಲ್ಲಿ ಪರಿಶಿಷ್ಟ ಮಕ್ಕಳಿಗೆ ತಾರತಮ್ಯ; ದೂರು ನೀಡಿದ ದಲಿತ ವ್ಯಕ್ತಿಗೆ ಬೆದರಿಕೆ ಕರೆ

Update: 2021-09-27 17:01 GMT

ಹೊಸದಿಲ್ಲಿ,ಸೆ.27: ಪರಿಶಿಷ್ಟ ಜಾತಿಯ ಮಕ್ಕಳ ಮಧ್ಯಾಹ್ನದೂಟದ ಬಟ್ಟಲುಗಳನ್ನು ಪ್ರತ್ಯೇಕವಾಗಿ ಇಟ್ಟಿದ್ದಕ್ಕಾಗಿ ಉತ್ತರಪ್ರದೇಶದ ಸರಕಾರಿ ಶಾಲೆಯ ಸಿಬ್ಬಂದಿಯ ವಿರುದ್ಧ ದೂರು ನೀಡಿದ್ದ ದಲಿತ ಸಮುದಾಯದ ಗ್ರಾಮಪಂಚಾಯತ್ ಅಧ್ಯಕ್ಷೆಯ ಪತಿಗೆ ಮೇಲ್ಜಾತಿಯ ಗ್ರಾಮಸ್ಥರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ವರದಿಯಾಗಿದೆ.

ಪ್ರಬಲ ಠಾಕೂರ್ ಸಮುದಾಯದಿಂದ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ದೌಡಾಪುರ ಗ್ರಾಮ ಪಂಚಾಯತ್ ಪ್ರಧಾನರಾದ ಮಂಜುದೇವಿ ಹಾಗೂ ಆಕೆಯ ಪತಿ ಹಾಗೂ ಗ್ರಾಮ ಪ್ರಧಾನ ಪ್ರತಿನಿಧಿಯಾದ ಸಾಹಬ್ ಸಿಂಗ್ ಅವರು ಮೈನ್ಪುರಿ ಜಿಲ್ಲೆಯಲ್ಲಿರುವ ತಮ್ಮ ಮನೆಯನ್ನು ತೊರೆದುಹೋಗಿದ್ದಾರೆಂದು ಮೂಲಗಳು ತಿಳಿಸಿವೆ.

ದಲಿತ ಸಮುದಾಯದ ವಿದ್ಯಾರ್ಥಿಗಳ ಮಧ್ಯಾಹ್ನದೂಟದ ಬಟ್ಟಲುಗಳನ್ನು ಪ್ರತ್ಯೇಕವಾಗಿರಿಸಲಾಗುತ್ತಿತ್ತು ಹಾಗೂ ಅವರ ಬಟ್ಟಲುಗಳನ್ನು ಮುಟ್ಟಲು ಶಾಲಾ ಸಿಬ್ಬಂದಿ ನಿರಾಕರಿಸುತ್ತಿದ್ದುದರಿಂದ ಪರಿಶಿಷ್ಟ ವಿದ್ಯಾರ್ಥಿಗಳು ತಮ್ಮ ಬಟ್ಟಲುಗಳನ್ನು ತಾವೇ ತೊಳೆದಿಡಬೇಕಾಗುತ್ತಿತ್ತು.

 ಠಾಕೂರ್ ಸಮುದಾಯದ ಕೆಲವರು ತನಗೆ ಗುಂಡಿಕ್ಕುವ ಬೆದರಿಕೆಯೊಡ್ಡಿದ್ದರು ಹಾಗೂ ತನ್ನ ಮೂಳೆಗಳನ್ನು ಮುರಿಯುವ ಬೆದರಿಕೆ ಹಾಕಿದ್ದರು ಮತ್ತು ತನ್ನ ವಿರುದ್ಧ ಜಾತಿನಿಂದನೆಯ ಮಾತುಗಳನ್ನಾಡಿದ್ದಾರೆ ಹಾಗೂ ಗ್ರಾಮದಲ್ಲಿ ತಾವು ದಾಂಧಲೆಯನ್ನು ಸೃಷ್ಟಿಸುವುದಾಗಿಯೂ ಅವರು ಬೆದರಿಕೆಯೊಡ್ಡಿದ್ದಾರೆಂದು ಸಾಹಬ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಲಿ ಅಥವಾ ಪೊಲೀಸ್ ಅಧೀಕ್ಷಕರಾಗಲಿ ಭೇಟಿಗೆ ಸಿಗುತ್ತಿಲ್ಲವೆಂದು ಅವರು ಹೇಳಿದ್ದಾರೆ.

ದೌಡಾಪುರ ಸರಕಾರಿ ಪ್ರಾಥಮಿಕ ಶಾಲೆಯ 80 ವಿದ್ಯಾರ್ಥಿಗಳ ಪೈಕಿ 60 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆದಾಗ್ಯೂ ಕೇವಲ ಸಾಮಾನ್ಯ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳ ಬಟ್ಟಲುಗಳನ್ನು ಮಾತ್ರ ಅಡುಗೆಮನೆಯಲ್ಲಿ ಇರಿಸಲಾಗುತ್ತಿದೆ.

ಸಾಹಿಬ್ ಸಿಂಗ್ ನೀಡಿದ್ದ ದೂರಿನ ಮೇರೆಗೆ ಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಗಳು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಬಟ್ಟಲುಗಳನ್ನು ಮುಟ್ಟಲು ನಿರಾಕರಿಸುತ್ತಿದ್ದ ಇಬ್ಬರು ಬಾಣಸಿಗರನ್ನು ಸೇವೆಯಿಂದ ವಜಾಗೊಳಿಸಿದ್ದರು.

 ಈ ಶಾಲೆಯಲ್ಲಿ ಠಾಕೂರ್ ಸಮುದಾಯದ ಕೇವಲ ಏದಾರು ಮಕ್ಕಳಷ್ಟೇ ಕಲಿಯುತ್ತಿದಾರೆಯೇ? ಎಂದು ಸಾಹಬ್ ಸಿಂಗ್ ದಂಪತಿಯ ದಲಿತ ಸಮುದಾಯದ ನೆರೆಹೊರೆಯವೊಬ್ಬರು ಹೇಳುತ್ತಾರೆ.

ಒಂದು ದಿನ ಆಹಾರ ಕೇಳಿ ತನ್ನ ಪುತ್ರಿ ಅಡುಗೆಕೋಣೆಯತ್ತ ತೆರಳಿದಾಗ ಸಿಬ್ಬಂದಿಯೊಬ್ಬರು ಒಳಗೆ ಬಾರದಂತೆ ಕಿರುಚಾಡಿದ್ದರೆಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News