ಕಪ್ಪುಹಣ ಬಿಳುಪು ಪ್ರಕರಣ: ಇಡಿಯಿಂದ ಸಿಎಂ ಗೆಹ್ಲೋಟ್ ಸೋದರನ ವಿಚಾರಣೆ

Update: 2021-09-27 16:58 GMT

ಹೊಸದಿಲ್ಲಿ, ಸೆ.27: ರಸಗೊಬ್ಬರ ರಫ್ತಿನಲ್ಲಿ ಅಕ್ರಮಗಳು ನಡೆದಿರುವ ಆರೋಪಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹಿರಿಯ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾದರು.

ಬೆಳಗ್ಗೆ 11:00 ಗಂಟೆಯ ವೇಳೆಗೆ ತನ್ನ ನ್ಯಾಯವಾದಿ ಜೊತೆ ತನಿಖಾ ಸಂಸ್ಥೆಯ ಕಾರ್ಯಾಲಯಕ್ಕೆ ಹಾಜರಾದ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಿಸಲಾಯಿತು. ಆನಂತರ ಅಗ್ರಸೇನ್ ಅವರು ತನ್ನ ವಿರುದ್ಧ ಇಡಿ ಕ್ರಮ ಕೈಗೊಳ್ಳುವುದರ ವಿರುದ್ಧ ರಕ್ಷಣೋ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ನೀಡಿದ ಆದೇಶವೊಂದರಲ್ಲಿ ತನಿಖೆಗೆ ಸಹಕರಿಸುವಂತೆ ಅಗ್ರಸೇನ ಅವರಿಗೆ ನಿರ್ದೇಶನ ನೀಡಿದೆಯೆಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ಜುಲೈನಲ್ಲಿ ಜಾರಿ ನಿರ್ದೇಶನಾಲಯವು ರಾಜಸ್ಥಾನದಲ್ಲಿರುವ ಅಗ್ರಸೇನ ಗೆಹ್ಲೋಟ್ ಅವರ ಉದ್ಯಮ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಿತ್ತು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ರಾಜಕೀಯ ಶೀತಲ ಸಮರ ನಡೆಯುತ್ತಿದ್ದ ಸಂದರ್ಭ ದಾಳಿಗಳು ನಡೆದಿದ್ದವು. ಅಗ್ರಸೇನ್ ಗೆಹ್ಲೋಟ್ ಅವರ ಪುತ್ರ ಅನುಪಮ್ ಕೂಡಾ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಮುಂದೆ ಹೇಳಿಕೆ ನೀಡಿದ್ದರು.

ಅಗ್ರಸೇನ ಗೆಹ್ಲೋಟ್ ಹಾಗೂ ಅವರ ಪುತ್ರ ಅನುಪಮ್ ಕ್ರಿಷಿ ಅವರಿಗೆ ಸೇರಿದ ಕಂಪೆನಿಯು ರಫ್ತಿಗೆ ನಿರ್ಬಂಧವಿರುವ ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಓಪಿ) ಅನ್ನು  ಕೈಗಾರಿಕಾ ಬಳಕೆಯ ಉಪ್ಪಿನ ಸೋಗಿನಲ್ಲಿ ಮಲೇಶ್ಯ ಹಾಗೂ ತೈವಾನ್ಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News