ದಿಲ್ಲಿ ಸರಕಾರಿ ಶಾಲೆಗಳಲ್ಲಿ ಇಂದಿನಿಂದ ದೇಶಭಕ್ತಿಯ ಪಠ್ಯ

Update: 2021-09-28 03:53 GMT
ಅರವಿಂದ್ ಕೇಜ್ರಿವಾಲ್ (Photo source: PTI)

ಹೊಸದಿಲ್ಲಿ, ಸೆ.28: ವಿದ್ಯಾರ್ಥಿಗಳಲ್ಲಿ ನೈಜ ದೇಶಪ್ರೇಮವನ್ನು ಮೂಡಿಸುವ ಮತ್ತು ದೇಶದ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಸರಕಾರ ಎಲ್ಲ ಸರಕಾರಿ ಶಾಲೆಗಳಲ್ಲಿ ಇಂದಿನಿಂದ ದೇಶಭಕ್ತಿಯ ಪಠ್ಯಕ್ಕೆ ಚಾಲನೆ ನೀಡಲಿದೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಸೆಪ್ಟೆಂಬರ್ 28ರಿಂಧ ರಾಷ್ಟ್ರರಾಜಧಾನಿಯ ಎಲ್ಲ ಸರಕಾರಿ ಶಾಲೆಗಳಲ್ಲಿ ನರ್ಸರಿಯಿಂದ 12ನೇ ತರಗತಿಯವರೆಗೆ ಎಲ್ಲ ತರಗತಿಗಳಿಗೆ ದೇಶಭಕ್ತಿಯ ಪಾಠ ಬೋಧಿಸಲಾಗುವುದು. ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್ ಹೊಸ ಪಠ್ಯಕ್ಕೆ ಚಾಲನೆ ನೀಡುವರು.

ದೇಶಭಕ್ತಿ ಪಠ್ಯಕ್ರಮದ ಅನ್ವಯ ನರ್ಸರಿಯಿಂದ 8ನೇ ತರಗತಿಯವರೆಗೆ ಪ್ರತಿದಿನ ಒಂದು ಗಂಟೆಯನ್ನು ದೇಶಭಕ್ತಿಯ ಅಧ್ಯಯನಕ್ಕೆ ಮೀಸಲಿಡಲಾಗಿದೆ. 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಎರಡು ಗಂಟೆಯ ಪಾಠ ದೇಶಭಕ್ತಿಯ ಬಗ್ಗೆ ಇರುತ್ತದೆ. ಈ ಸಂಬಂಧ ಶಿಕ್ಷಣ ನಿರ್ದೇಶನಾಲಯ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಇದರ ಅನ್ವಯ ಐದು ನಿಮಿಷಗಳ ದೇಶಭಕ್ತಿ ಧ್ಯಾನ ಸೇರಿರುತ್ತದೆ. ಇದರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯಿಂದ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಾರೆ. ತಮಗೆ ದೇಶಭಕ್ತರು ಎನಿಸಿದ ಐದು ಮಂದಿಯನ್ನು ಸ್ಮರಿಸಿ ರಾಷ್ಟ್ರಗೌರವದ ಪ್ರತಿಜ್ಞೆ ಕೈಗೊಳ್ಳುತ್ತಾರೆ.

ಇದು ಮಾಮೂಲಿ ಕಲಿಕೆಯಾಗಿರುವುದಿಲ್ಲ ಹಾಗೂ ಇದಕ್ಕೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಇದು ಚಟುವಟಿಕೆ ಆಧರಿತವಾಗಿದ್ದು, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಬಗ್ಗೆ ಮತ್ತು ದೇಶದ ಹೆಮ್ಮೆಯ ಬಗ್ಗೆ ಕಥೆಗಳನ್ನು ಹೇಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ದೇಶದ ಬಗೆಗಿನ ಹೊಣೆಗಾರಿಕೆ ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News