ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಹಿಂದಕ್ಕೆ ಸರಿದ ಅಫ್ಗಾನ್ ರಾಯಭಾರಿ

Update: 2021-09-28 15:19 GMT

ವಿಶ್ವಸಂಸ್ಥೆ, ಸೆ.28: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ಜಾಗತಿಕ ಮುಖಂಡರನ್ನುದ್ದೇಶಿಸಿ ಮಾತನಾಡಬೇಕಿದ್ದ ಅಫ್ಗಾನಿಸ್ತಾನದ ರಾಯಭಾರಿ ಗುಲಾಂ ಇಸಾಕ್ಝಾಯಿ ಅಂತಿಮ ಕ್ಷಣದಲ್ಲಿ ಸಭೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಪದಚ್ಯುತಗೊಂಡಿದ್ದ ಅಶ್ರಫ್ ಘನಿ ಅಧ್ಯಕ್ಷತೆಯ ಸರಕಾರ ನೇಮಿಸಿರುವ ಇಸಾಕ್ಝಾಯಿ ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾಲಿಬಾನ್ಗಳನ್ನು ವಿರೋಧಿಸಿ ಮಾತನಾಡಲಿದ್ದರು. ಆದರೆ ಸಭೆಯಲ್ಲಿ ಮಾತನಾಡಲಿರುವ ಪ್ರಮುಖರ ಪಟ್ಟಿಯಿಂದ ಇಸಾಕ್ಝಾಯಿ ಹೆಸರನ್ನು ಅಂತಿಮ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. 

‘ಅಫ್ಗಾನಿಸ್ತಾನವು ಸೋಮವಾರ ನಿಗದಿಯಾಗಿದ್ದ ಸಾಮಾನ್ಯ ಸಭೆಯಿಂದ ತನ್ನ ಭಾಗವಹಿಸುವಿಕೆಯನ್ನು ಹಿಂಪಡೆದಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈ ನಿರ್ಧಾರಕ್ಕೆ ಕಾರಣ ತಿಳಿಸಿಲ್ಲ ’ ಎಂದು ಸಾಮಾನ್ಯಸಭೆಯ ಅಧ್ಯಕ್ಷರ ವಕ್ತಾರೆ ಮೋನಿಕಾ ಗ್ರಾಲೆ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಅಫ್ಗಾನಿಸ್ತಾನದ ಪ್ರತಿನಿಧಿಯಾಗಿ ಇಸಾಕ್ಝಾಯಿ ಮುಂದುವರಿಯುವುದಕ್ಕೆ ತಾಲಿಬಾನ್ ತೀವ್ರ ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸಿತ್ತು. ಈಗ ಅಫ್ಗಾನಿಸ್ತಾನದಲ್ಲಿ ತನ್ನ ನೇತೃತ್ವದ ಸರಕಾರ ಇರುವುದರಿಂದ ಈ ಹಿಂದಿನ ಸರಕಾರ ನೇಮಿಸಿರುವ ರಾಯಭಾರಿಗೆ ಮಾನ್ಯತೆಯಿಲ್ಲ ಎಂಬುದು ತಾಲಿಬಾನ್ನ ವಾದವಾಗಿದ್ದು ಈ ವಿಷಯವನ್ನು ಉಲ್ಲೇಖಿಸಿ ಅಫ್ಗಾನಿಸ್ತಾನದ ವಿದೇಶ ವ್ಯವಹಾರ ಸಚಿವ ಅಮೀರ್ಖಾನ್ ಮುತ್ತಖಿ ಸೆ.20ರಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರ್ರಸ್ಗೆ ಪತ್ರ ಬರೆದಿದ್ದರು.

ಈ ಮಧ್ಯೆ, ವಿಶ್ವಸಂಸ್ಥೆಗೆ ಅಫ್ಗಾನಿಸ್ತಾನದ ರಾಯಭಾರಿಯಾಗಿ ತಾಲಿಬಾನ್ನ ವಕ್ತಾರ ಸುಹೈಲ್ ಶಹೀನ್ ರನ್ನು ನೇಮಿಸಿರುವುದಾಗಿ ಇತ್ತೀಚೆಗೆ ತಾಲಿಬಾನ್ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News