×
Ad

ಬ್ರಿಟನ್: ದಾಖಲೆ ಮಟ್ಟಕ್ಕೆ ಏರಿಕೆಯಾದ ತೈಲ ದರ; ತೈಲ ಪೂರೈಕೆಗೆ ಸೇನೆಯ ನೆರವು ಬಳಕೆ

Update: 2021-09-28 20:56 IST

ಲಂಡನ್, ಸೆ.28: ಬ್ರಿಟನ್ ನಲ್ಲಿ ತೈಲೋತ್ಪನ್ನಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದಾಗಿ ತೈಲ ಬೆಲೆ ಕಳೆದ 8 ವರ್ಷಗಳಲ್ಲೇ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ತೈಲದ ಕೊರತೆಯಿಂದಾಗಿ ಬಳಕೆದಾರರು ಖರೀದಿಗೆ ಮುಗಿಬಿದ್ದ ಕಾರಣ ಪೆಟ್ರೋಲ್ ಬಂಕ್ ಗಳಲ್ಲಿ ಗೊಂದಲ, ಅವ್ಯವಸ್ಥೆ ಉಂಟಾಗಿದ್ದು ತೈಲ ಪೂರೈಕೆ ಸುಸೂತ್ರವಾಗಲು ಸೇನೆಯ ನೆರವು ಪಡೆಯಲಾಗಿದೆ ಎಂದು ಸರಕಾರ ಹೇಳಿದೆ.

ಅಗತ್ಯಬಿದ್ದರೆ ಸೇನೆಯ ಟ್ಯಾಂಕರ್ ಚಾಲಕರನ್ನು ತೈಲ ಪೂರೈಕೆ ಕಾರ್ಯಕ್ಕೆ ಬಳಸಲಾಗುತ್ತದೆ .ಮುಂಬರುವ ದಿನಗಳಲ್ಲಿ ಪೂರೈಕೆ ಮತ್ತು ಬೇಡಿಕೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಬ್ರಿಟನ್ ನ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಕ್ವಾಸಿ ಕ್ವರ್ಟೆಂಗ್ ಸೋಮವಾರ ಹೇಳಿದ್ದಾರೆ. ರವಿವಾರ ಲೀಟರ್ ಪೆಟ್ರೋಲ್ ನ ಸರಾಸರಿ ದರ 1.86 ಡಾಲರ್ಗೆ ತಲುಪಿದ್ದು ಇದು 2013ರ ಸೆಪ್ಟಂಬರ್ ಬಳಿಕದ ಅತ್ಯಧಿಕ ದರವಾಗಿದೆ.

ಈ ಮಧ್ಯೆ, ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗೆ ಹಾಜರಾಗಿರುವವರ ಮೌಲ್ಯಮಾಪನ ಕಾರ್ಯಕ್ಕೆ ನೆರವಾಗಲು ಸೇನೆಯ ಚಾಲನಾ ಪರಿವೀಕ್ಷಕರ ನೆರವನ್ನೂ ಪಡೆಯಲಾಗಿದೆ. ಜೊತೆಗೆ, 5000 ವಿದೇಶಿ ಚಾಲಕರಿಗೆ ತಾತ್ಕಾಲಿಕ ವೀಸಾ ಮಂಜೂರುಗೊಳಿಸಲಾಗಿದೆ. ಆದರೆ 3 ತಿಂಗಳ ತಾತ್ಕಾಲಿಕ ವೀಸಾ ಅತ್ಯಂತ ಕಡಿಮೆ ಅವಧಿಯಾಗಿರುವದರಿಂದ ವಿದೇಶಿ ಪ್ರಜೆಗಳು ಆಸಕ್ತಿ ತೋರುವ ಸಾಧ್ಯತೆಯಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಕೊರೋನ ಸೋಂಕಿನ ಸಮಸ್ಯೆ, ಬ್ರಿಟನ್ ಯುರೋಪಿಯನ್ ಯೂನಿಯನ್ನಿಂದ ನಿರ್ಗಮಿಸಿದ ಬಳಿಕ ಬೃಹತ್ ಪ್ರಮಾಣದಲ್ಲಿ ವಿದೇಶಿ ಕೆಲಸಗಾರರು ಬ್ರಿಟನ್ನಿಂದ ನಿರ್ಗಮಿಸಿರುವುದು ಲಾರಿ ಚಾಲಕರ ಕೊರತೆಗೆ ಮೂಲ ಕಾರಣಗಳಾಗಿವೆ.

ಲಾರಿ ಚಾಲಕರ ಕೊರತೆಯಿಂದಾಗಿ ದೇಶದ ಸುಮಾರು 90% ಪೆಟ್ರೋಲ್ ಬಂಕ್ಗಳಲ್ಲಿ ತೈಲ ಕಾಲಿಯಾಗಿದೆ .ಪೂರೈಕೆಗೆ ಎದುರಾಗಿರುವ ಸಮಸ್ಯೆಯ ಲಾಭ ಪಡೆದ ಕೆಲವು ಚಿಲ್ಲರೆ ಮಾರಾಟಗಾರರು ದರ ಏರಿಸುತ್ತಿದ್ದಾರೆ ಎಂದು ಪೆಟ್ರೋಲ್ ರಿಟೈಲರ್ಸ್ ಅಸೋಸಿಯೇಷನ್(ಪಿಆರ್ಎ) ಹೇಳಿದೆ. ತೈಲ ದಾಸ್ತಾನು ಸಾಕಷ್ಟಿದೆ. ಆದರೆ ಲಾರಿ ಚಾಲಕರ ಕೊರತೆಯಿಂದ ಪೆಟ್ರೋಲ್ ಬಂಕ್ ಗಳಿಗೆ ಸೂಕ್ತ ಸಮಯದಲ್ಲಿ ಪೂರೈಸಲು ತೊಡಕಾಗಿದೆ ಎಂದು ಸಚಿವರು, ತೈಲ ಮಾರಾಟ ಸಂಸ್ಥೆಗಳು ಹೇಳಿವೆ.

ದೇಶದ ಬಹುತೇಕ ಪೆಟ್ರೋಲ್ ಬಂಕ್ಗಳ ಎದುರು ವಾಹನಗಳ ಮೈಲುದ್ದದ ಸಾಲು ಬೆಳೆದಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪೆಟ್ರೋಲ್ ಖರೀದಿಗೆ ಜನರ ನೂಕುನುಗ್ಗಲು ಕೆಲವೊಮ್ಮೆ ಘರ್ಷಣೆಯ ರೂಪವನ್ನೂ ತಳೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರೋಗ್ಯಸೇವಾ ಸಿಬ್ಬಂದಿಗಳಿಗೆ ಆದ್ಯತೆಗೆ ಆಗ್ರಹ

ಪೆಟ್ರೋಲ್ ಗಾಗಿ ಗ್ರಾಹಕರ ಧಾವಂತ ಹೆಚ್ಚುತ್ತಿರುವಂತೆಯೇ, ಪೆಟ್ರೋಲ್ ಪೂರೈಕೆಯಲ್ಲಿ ತಮಗೆ ಮೊದಲ ಆದ್ಯತೆ ನೀಡಬೇಕೆಂದು ಆರೋಗ್ಯಸೇವಾ ಸಿಬಂದಿಗಳು ಸರಕಾರವನ್ನು ಆಗ್ರಹಿಸಿದ್ದಾರೆ. ಪೆಟ್ರೋಲ್ ಖರೀದಿಗೆ ಪ್ರತಿಯೊಬ್ಬರಿಗೂ ಅವರದೇ ಆದ ಅಗತ್ಯವಿರುತ್ತದೆ. ಆದರೆ, ಆರೋಗ್ಯಸೇವಾ ಕಾರ್ಯ ಅತ್ಯಂತ ಅಗತ್ಯದ ಕ್ಷೇತ್ರವಾಗಿರುವುದರಿಂದ ಈ ಸಿಬಂದಿಗಳಿಗೆ ತುರ್ತು ಮತ್ತು ಆದ್ಯತೆಯ ಮೇರೆಗೆ ಪೆಟ್ರೋಲ್ ಒದಗಿಸಬೇಕು ಎಂದು ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ನ ಮುಖ್ಯಸ್ಥ ಡಾ. ಚಾಂದ್ ನಾಗ್ ಪಾಲ್  ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News