×
Ad

"ನಿಮ್ಮ ಪರವಾನಿಗೆ ಏಕೆ ರದ್ದುಪಡಿಸಬಾರದು?": ಕೊಲ್ಕತ್ತಾ ಟಿವಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶೋಕಾಸ್ ನೋಟಿಸ್

Update: 2021-09-29 13:18 IST
Photo: Twitter

ಕೊಲ್ಕತ್ತಾ: ಕೊಲ್ಕತ್ತಾ ಟಿವಿ ಮಾಲಕ ಕೌಸ್ತವ್ ರಾಯ್ ಅವರಿಗೆ  ತಮ್ಮ ಹಣಕಾಸಿಗೆ ಸಂಬಂಧಿಸಿದಂತೆ  ಪ್ರಶ್ನೆಗಳಿಗೆ ಉತ್ತರಿಸಲು  ಜಾರಿ ನಿರ್ದೇಶನಾಲಯದೆದುರು ಹಾಜರಾದ ಒಂದು ವಾರದೊಳಗೆ ಚಾನಲ್‍ನ ಸಂಬಂಧಿತರಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಶೋಕಾಸ್ ನೋಟಿಸ್ ಜಾರಿಗೊಳಿಸಿ, ಚಾನಲ್‍ನ ಪರವಾನಿಗೆ ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿ ಒಂದು ವಾರದೊಳಗೆ ಉತ್ತರಿಸುವಂತೆ ಹೇಳಿದೆ.

ಚಾನಲ್‍ಗೆ ಗೃಹ ವ್ಯವಹಾರಗಳ ಸಚಿವಾಲಯವು ʼಭದ್ರತಾ ಕ್ಲಿಯರೆನ್ಸ್' ನೀಡಿಲ್ಲ ಎಂಬ ಕಾರಣ ನೀಡಿ ಪರವಾನಗಿ ರದ್ದುಗೊಳಿಬಾರದೇಕೆ ಎಂದು ಸೆಪ್ಟೆಂಬರ್ 27ರಂದು ನೀಡಲಾಗಿರುವ ನೋಟಿಸ್‍ನಲ್ಲಿ ತಿಳಿಸಲಾಗಿದೆ.

ಬಂಗಾಳಿ ಸುದ್ದಿ ಚಾನಲ್ ಆಗಿರುವ ಕೊಲ್ಕತ್ತಾ ಟಿವಿ 2006ರಲ್ಲಿ ಆರಂಭಗೊಂಡಿತ್ತು. ಸುಮಾರು 322 ಉದ್ಯೋಗಿಗಳನ್ನು ಹೊಂದಿರುವ ಚಾನಲ್ ಕೇಂದ್ರದ ನರೇಂದ್ರ ಮೊದಿ ಸರಕಾರದ ಕುರಿತು ಟೀಕಾತ್ಮಕ ನಿಲುವು ಹೊಂದಿದ್ದರೆ ರಾಜ್ಯದ ಮಮತಾ ಬ್ಯಾನರ್ಜಿ ಸರಕಾರದ ಕುರಿತು ಮೃದು ಧೋರಣೆ ಹೊಂದಿದೆ.

ಪ್ರಧಾನಿಯನ್ನು ಟೀಕಿಸುವ ಮಾಧ್ಯಮವನ್ನು ಹೇಗಾದರೂ ಮಾಡಿ ಅದುಮಬೇಕೆಂಬ ಉದ್ದೇಶದಿಂದ ಈ ಶೋಕಾಸ್ ನೋಟಿಸ್ ಜಾರಿಯಾಗಿದೆ ಇದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನವಾಗಿದೆ ಎಂದು ಕೊಲ್ಕತ್ತಾ ಟಿವಿ ಮಾಲಕ ಕೌಸ್ತವ್ ರಾಯ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ದಿಲ್ಲಿಯಲ್ಲಿ ನ್ಯೂಸ್‍ಲಾಂಡ್ರಿ ಮತ್ತು ನ್ಯೂಸ್‍ಕ್ಲಿಕ್ ಮಾಧ್ಯಮ ಕಚೇರಿಗಳ ಮೇಲೆ ಸಮೀಕ್ಷೆಯ ನೆಪದಲ್ಲಿ ಐಟಿ ಅಧಿಕಾರಿಗಳು ಭೇಟಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News