×
Ad

ನೈರ್ಮಲ್ಯ ಕಾರ್ಮಿಕರ ಸಾವಿಗೆ ಹೊಣೆಗಾರಿಕೆ ನಿಗದಿಪಡಿಸಿ: ಕೇಂದ್ರ, ರಾಜ್ಯಗಳಿಗೆ ಎನ್ಎಚ್ಆರ್ಸಿ ಸೂಚನೆ

Update: 2021-09-29 22:56 IST

ಹೊಸದಿಲ್ಲಿ, ಸೆ.29: ಮ್ಯಾನುವಲ್ ಸ್ಕಾವೆಂಜಿಂಗ್ ಸಂದರ್ಭ ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಗಳು ಸಂಭವಿಸಿದಾಗ ಅವುಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಕರೆ ನೀಡುವ ಸಲಹಾಪತ್ರ (ಅಡ್ವ್ವೈಸರಿ) ವನ್ನು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಬುಧವಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬಿಡುಗಡೆಗೊಳಿಸಿದೆ.‌

ನೈರ್ಮಲ್ಯ ಕಾರ್ಮಿಕರನ್ನು ಮುಂಚೂಣಿಯ ಆರೋಗ್ಯ ಕಾರ್ಯಕರ್ತರೆಂಬುದಾಗಿ ಪರಿಗಣಿಸಬೇಕೆಂದು ಅದು ಸಲಹೆ ನೀಡಿದೆ. ಈ ಅಪಾಯಕಾರಿಯಾದ ಕೆಲಸದಲ್ಲಿ ನಿರತರಾಗಿರುವ ವ್ಯಕ್ತಿಗಳಿಗೆ ಸುರಕ್ಷತೆಯನ್ನು ಹಾಗೂ ಮಾನವಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸಬೇಕೆಂದು ಎನ್ಎಚ್ಆರ್ಸಿ ತಿಳಿಸಿದೆ.
 
‘‘ಅಪಾಯಕಾರಿಯಾದ ಸ್ವಚ್ಛತಾಕಾರ್ಯಗಳು ಸೇರಿದಂತೆ ಮ್ಯಾನುವಲ್ ಸ್ಕಾವೆಂಜಿಂಗ್ ಸಂದರ್ಭದಲ್ಲಿ ಸಂಭವಿಸುವ ಯಾವುದೇ ಸಾವಿಗೆ ಸ್ಥಳೀಯ ಆಡಳಿತ ಹಾಗೂ ಗುತ್ತಿಗೆದಾರ/ಉದ್ಯೋಗದಾತ ಇವರ ಮೇಲೆ ಜಂಟಿಯಾಗಿ ಹೊಣೆಗಾರಿಕೆಯನ್ನು ಹೊರಿಸಬೇಕೆಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಎನ್ಎಚ್ಆರ್ಸಿಯು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳ ಕಳುಹಿಸಿರುವ ಸಲಹಾಪತ್ರದಲ್ಲಿ ತಿಳಿಸಿದೆ ಈ ಕುರಿತ ಕಾರ್ಯಾನುಷ್ಠಾನ ವರದಿಯನ್ನು ಮೂರು ತಿಂಗಳೊಳಗೆ ಸಲ್ಲಿಸುವಂತೆಯೂ ಅದು ಕೋರಿದೆ.

ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕುರಿತ ಕೇಂದ್ರ ಸಚಿವಾಲಯ, ವಸತಿ ಹಾಗೂ ನಗರ ವ್ಯವಹಾರಗ ಸಚಿವಾಲಯ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಕ್ಕೂ ಸಲಹಾ ಪತ್ರವನ್ನು ಕಳುಹಿಸಲಾಗಿದೆ. ನೈರ್ಮಲ್ಯ ಕಾರ್ಮಿಕರಿಗೆ ಸೂಕ್ತವಾದ ಸುರಕ್ಷಿತ ಉಡುಪು, ತಂತ್ರಜ್ಞಾನದ ಬಳಕೆ, ಏಜೆನ್ಸಿಗಳು ಅಥವಾ ಉದ್ಯೋಗಿಗಳ ಮೇಲೆ ಹೊಣೆಗಾರಿಕೆಯನ್ನು ಹೊರಿಸುವುದು ಸೇರಿದಂತೆ ವಿಷಯಗಳ ಬಗ್ಗೆ ಸಲಹಾಪತ್ರದಲ್ಲಿ ಗಮನಹರಿಸಲಾಗಿದೆ.

ನೈರ್ಮಲ್ಯ ಸೇವೆಗಳ ಮೂಲ ಸೌಕರ್ಯವನ್ನು ಬಲಪಡಿಸುವಿಕೆ, ನೈರ್ಮಲ್ಯ ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಮ್ಯಾನುವಲ್ ಸ್ಕಾವೆಂಜರ್ಗಳಿಗೆ ನ್ಯಾಯದಾನ ಹಾಗೂ ಪುನರ್ವಸತಿಯನ್ನು ಖಾತರಿಪಡಿಸುವ ಬಗ್ಗೆಯೂ ಸಲಹಾಪತ್ರದಲ್ಲಿ ಪ್ರಸ್ತಾವಿಸಲ ಆಗಿದೆ.

ಶೌಚಗುಂಡಿಗಳು ಅಥವಾ ಒಳಚರಂಡಿಯನ್ನು ಪ್ರವೇಶಿಸುವ ಎಲ್ಲಾ ನೈರ್ಮಲ್ಯ ಕಾರ್ಮಿಕರಿಗೆ ಹೆಲ್ಮೆಟ್ಗಳು, ಸುರಕ್ಷತಾ ಜಾಕೆಟ್ಗಳು, ಕೈಗವಸುಗಳು, ಮಾಸ್ಕ್ಗಳು, ಗಮ್ಬೂಟುಗಳು, ಸುರಕ್ಷತಾ ಕನ್ನಡಕಗಳು, ಟಾರ್ಚ್ಲೈಟ್ಗಳು ಹಾಗೂ ಆಕ್ಸಿಜನ್ ಸಿಲಿಂಡರ್ಗಳನ್ನು ಒದಗಿಸಬೇಕೆಂದು ಶಿಫಾರಸು ಮಾಡಿದೆ. ಮ್ಯಾನುವಲ್ ಸ್ಕಾವೆಂಜರ್ಗಳ ನಿಯೋಜನೆ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆಯ ಅನುಷ್ಠಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆಯೂ ಎನ್ಎಚ್ಆರ್ಸಿ ಸಲಹಾಪತ್ರದಲ್ಲಿ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News