ಸೆಪ್ಟೆಂಬರ್ ತಿಂಗಳಲ್ಲಿ 'ದಾಖಲೆಯ ಮಳೆ'

Update: 2021-09-30 05:19 GMT

ಪುಣೆ/ ಹೊಸದಿಲ್ಲಿ: ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಕಳೆದ 27 ವರ್ಷದಲ್ಲೇ ಎರಡನೇ ಗರಿಷ್ಠ ಮಳೆ ಈ ತಿಂಗಳಲ್ಲಿ ಬಿದ್ದಿದೆ. ಇದರಿಂದಾಗಿ ಆಗಸ್ಟ್ 31ರ ಕೊನೆಗೆ ಇದ್ದ ಮುಂಗಾರು ಮಳೆಯ ಕೊರತೆ ಶೇಕಡ 9ರಿಂದ ಶೇಕಡ 1ಕ್ಕೆ ಇಳಿದಿದೆ. ಈ ಮೂಲಕ ನಾಲ್ಕು ತಿಂಗಳ ಮಳೆಗಾಲ ವಾಡಿಕೆ ಮಳೆಯ ಸನಿಹದೊಂದಿಗೆ ಅಂತ್ಯವಾಗಲಿದೆ.

ಭಾರತೀಯ ಹವಾಮಾನ ಇಲಾಖೆ ಜೂನ್ ಆರಂಭದಿಂದ ಸೆಪ್ಟೆಂಬರ್ ಕೊನೆಯ ವರೆಗೆ ದೇಶದಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಿತ್ತು. ವಾಡಿಕೆಯ ಶೇಕಡ 101ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಅಂದಾಜಿನಲ್ಲಿ ಶೇಕಡ 4ರಷ್ಟು ವ್ಯತ್ಯಾಸವಾಗಬಹುದು ಎಂದು ಹೇಳಿತ್ತು. ದೇಶದಲ್ಲಿ 1961-2010ರ ಅವಧಿಯ ಧೀಘಾವಧಿ ಸರಾಸರಿ ಮಳೆ 88 ಸೆಂಟಿಮೀಟರ್. ಈ ಋತುವಿನಲ್ಲಿ ಈಗಾಗಲೇ 87 ಸೆಂಟಿಮೀಟರ್ ಮಳೆ ಬಿದ್ದಿದ್ದು, ಮುಂಗಾರು ಇನ್ನೂ ಅಂತ್ಯವಾಗಿಲ್ಲ.

"ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯನ್ನು ಹವಾಮಾನ ಇಲಾಖೆ ಅಂದಾಜಿಸಿತ್ತು. ಬಂಗಾಳಕೊಲ್ಲಿಯಲ್ಲಿ ಈ ಅವಧಿಯಲ್ಲಿ ಪದೇ ಪದೇ ಕಡಿಮೆ ಒತ್ತಡ ಪರಿಸ್ಥಿತಿ ಮತ್ತು ವಾಯುಭಾರ ಕುಸಿತ ಸಂಭವಿಸಿದೆ. ಇದರಿಂದಾಗಿ ಮುಂಗಾರು ಈ ತಿಂಗಳು ಸಕ್ರಿಯವಾಗಿತ್ತು. ಇಡೀ ಮುಂಗಾರು ಅವಧಿಗೆ ಸರಾಸರಿ ಮಳೆ ವಾಡಿಕೆಗಿಂತ ಅಲ್ಪಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ತಿಂಗಳು ಒಟ್ಟಾರೆ ಮಳೆಗೆ ಗಣನೀಯ ಕೊಡುಗೆ ನೀಡಿದೆ" ಎಂದು ಐಎಂಡಿ ಮಹಾನಿದೇರ್ಶಕ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಶೇಕಡ 34ರಷ್ಟು ಅಧಿಕ ಮಳೆ ಬಿದ್ದಿದೆ. ಸೆಪ್ಟೆಂಬರ್‌ನಲ್ಲಿ ವಾಡಿಕೆಯಂತೆ 166.6 ಮಿಲೀಮೀಟರ್ ಮಳೆಯಾಗಬೇಕು. ಆದರೆ ಈ ಬಾರಿ 223 ಮಿಲಿಮೀಟರ್ ಮಳೆ ಮೊದಲ 29 ದಿನಗಳಲ್ಲಿ ಬಿದ್ದಿದೆ. 1994ರಲ್ಲಿ ಬಿದ್ದ ಮಳೆಯನ್ನು ಹೊರತುಪಡಿಸಿದರೆ, ಕಳೆದ 27 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳ ಗರಿಷ್ಠ ಮಳೆ ಈ ವರ್ಷ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News