×
Ad

ಅಶೋಕ್ ಗೆಹ್ಲೋಟ್ ಒಳ್ಳೆಯ ಸ್ನೇಹಿತ, ನನ್ನ ಬಗ್ಗೆ ಅವರಿಗೆ ವಿಶ್ವಾಸವಿದೆ : ಪ್ರಧಾನಿ ಮೋದಿ ಗುಣಗಾನ

Update: 2021-10-01 10:33 IST
ಫೋಟೊ : PTI

ಜೈಪುರ: "ನಮ್ಮ ರಾಜಕೀಯ ಸಿದ್ಧಾಂತಗಳ ನಡುವೆ ಇರುವ ಭಿನ್ನತೆಯ ಹೊರತಾಗಿಯೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನನ್ನ ಮೇಲೆ ವಿಶ್ವಾಸವಿದೆ" ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಚ್ಚರಿ ಮೂಡಿಸಿದ್ದಾರೆ.

ರಾಜಸ್ಥಾನದಲ್ಲಿ ನಾಲ್ಕು ವೈದ್ಯಕೀಯ ಶಿಕ್ಷಣ ಕಾಲೇಜುಗಳಿಗೆ ಶಿಲಾನ್ಯಾಸ ನೆರವೇರಿಸುವ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿಯವರ ಮುಂದೆ ಗೆಹ್ಲೋಟ್, ರಾಜ್ಯದಲ್ಲಿ ತಾವು ಬಯಸಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮಂಡಿಸಿದಾಗ ಮೋದಿ ಮೇಲಿನಂತೆ ಪ್ರತಿಕ್ರಿಯಿಸಿದರು. ಜತೆಗೆ ಗೆಹ್ಲೋಟ್ ಅವರನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿದರು.

"ರಾಜಸ್ಥಾನ ಮುಖ್ಯಮಂತ್ರಿ ಮಾತನಾಡುವ ವೇಳೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮುಂದಿಟ್ಟಿದ್ದಾರೆ. ನನ್ನ ಮೇಲೆ ವಿಶ್ವಾಸ ಹೊಂದಿರುವುದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾವು ಭಿನ್ನ ರಾಜಕೀಯ ಸಿದ್ಧಾಂತಗಳನ್ನು ಅನುಸರಿಸುತ್ತೇವೆ. ಆದಾಗ್ಯೂ ನನ್ನ ಮೇಲಿನ ವಿಶ್ವಾಸದಿಂದ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ಈ ಸ್ನೇಹ, ವಿಶ್ವಾಸ ಮತ್ತು ನಂಬಿಕೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ" ಎಂದು ಮೋದಿ ಹೇಳಿದರು.

ದಸೂವಾ, ಹನುಮಾನ್‌ ಗಢ, ಬನ್‌ ಸ್ವಾರಾ ಮತ್ತು ಸಿರೋಹಿ ವೈದ್ಯ ಕಾಲೇಜುಗಳಿಗೆ ಶಿಲಾನ್ಯಾಸ ನೆರವೇರಿಸಿದ ಅವರು, ಜೈಪುರದಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯನ್ನು ಉದ್ಘಾಟಿಸಿದರು.

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಗೆಹ್ಲೋಟ್, "ನಮ್ಮಲ್ಲಿ ಪ್ರತಾಪ್‌ ಗಢ, ರಾಜಸಮಂದ್ ಮತ್ತು ಜಾಲೋರ್ ಹೀಗೆ ಮೂರು ಹಿಂದುಳಿದ ಪ್ರದೇಶಗಳಿವೆ. ಇಲ್ಲಿ ಇನ್ನೂ ವೈದ್ಯಕೀಯ ಶಿಕ್ಷಣ ಕಾಲೇಜುಗಳಿಲ್ಲ. ಈ ಜಿಲ್ಲೆಗಳಲ್ಲಿ ನೀವು ಹೊಸ ಕಾಲೇಜು ಆರಂಭವನ್ನು ಪರಿಗಣಿಸಬಹುದು. ನಮ್ಮಲ್ಲಿ ಎಲ್ಲ ಜಿಲ್ಲೆಗಳಲ್ಲೂ ವೈದ್ಯ ಕಾಲೇಜುಗಳು ಆದರೆ ಇತಿಹಾಸ ಸೃಷ್ಟಿಯಾಗಲಿದೆ" ಎಂದು ಹೇಳಿದ್ದರು. ನೀರಿನ ಲಭ್ಯತೆ, ವಿದ್ಯುತ್ ಪ್ರಸರಣ, ರಸ್ತೆ ಮತ್ತು ಶಿಕ್ಷಣ ಮುಂತಾದ ಮೂಲಸೌಕರ್ಯಕ್ಕೆ ಅವರು ಕೇಂದ್ರದ ಹಣಕಾಸು ನೆರವನ್ನು ಯಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News