'ಎರಡು ಲ್ಯಾಪ್‍ಟಾಪ್ʼ ಹೊಂದಿದ್ದಕ್ಕಾಗಿ ತಮಿಳುನಾಡು ವಿತ್ತ ಸಚಿವರನ್ನು ಚೆನ್ನೈ ಏರ್‌ ಪೋರ್ಟ್‌ ನಲ್ಲಿ ತಡೆದ ಅಧಿಕಾರಿ

Update: 2021-10-01 13:14 GMT

ಚೆನ್ನೈ: ಎರಡು ಲ್ಯಾಪ್‍ಟಾಪ್‍ಗಳನ್ನು ಹೊಂದಿದ್ದಕ್ಕಾಗಿ ತಮಿಳುನಾಡು ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್ ಅವರನ್ನು  ಚೆನ್ನೈ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 5.50ರ ಸುಮಾರಿಗೆ ಅಲ್ಲಿನ ಸಿಐಎಸ್‍ಎಫ್ ಅಧಿಕಾರಿಯೊಬ್ಬರು ತಡೆದರೆನ್ನಲಾದ ಘಟನೆ ಸ್ವಲ್ಪ ಹೊತ್ತು ಗೊಂದಲದ ವಾತಾವರಣಕ್ಕೆ ಕಾರಣವಾಯಿತು. ತೂತುಕುಡಿಗೆ ತೆರಳುತ್ತಿದ್ದ ಸಚಿವರು ಡೊಮೆಸ್ಟಿಕ್ ಟರ್ಮಿನಲ್‍ನಲ್ಲಿ ತಮ್ಮ ಬ್ಯಾಗ್ ಅನ್ನು ಸ್ಕ್ಯಾನಿಂಗ್‍ಗಾಗಿ ನೀಡಿದ್ದರು.

ಪ್ರಯಾಣಿಕರು ಎರಡು ಲ್ಯಾಪ್‍ಟಾಪ್ ಕೊಂಡುಹೋಗುವಂತಿಲ್ಲ ಎಂದು ಅಧಿಕಾರಿ ಸಚಿವರಿಗೆ ಹೇಳಿದ್ದರೆಂದು ಹೇಳಲಾಗಿದೆ. ಇದಕ್ಕೆ ಉತ್ತರಿಸಿದ ಸಚಿವರು ಅಂತಹ ನಿಯಮವೇನಿಲ್ಲ ಎಂದಿದ್ದರು. ಆದರೆ ನಂತರ ತ್ಯಾಗರಾಜನ್ ಯಾರು ಎಂದು ಅಲ್ಲಿನ ಸಿಬ್ಬಂದಿಗೆ ತಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರ ಬಳಿ ಕ್ಷಮೆ ಕೇಳಿದರು.

"ಸಚಿವರ ಬಳಿ ಎರಡಲ್ಲ, ಒಂದು ಲ್ಯಾಪ್‍ಟಾಪ್ ಇದೆ ಎಂದು ತಿಳಿದು  ಅದನ್ನು ಟ್ರೇ ನಲ್ಲಿ ಇಡುವಂತೆ ಸಿಐಎಸ್‍ಎಫ್ ಸಬ್-ಇನ್‍ಸ್ಪೆಕ್ಟರ್ ಹೇಳಿರಬಹುದು. ಅವರು ಉತ್ತರ ಭಾರತದವರಾಗಿರುವುದರಿಂದ ಅವರ ತಮಿಳು ಸ್ಪಷ್ಟವಾಗಿಲ್ಲ. ಇದರಿಂದ ಗೊಂದಲವುಂಟಾಗಿರಬಹುದು. ಆ ನಿರ್ದಿಷ್ಟ ಅಧಿಕಾರಿ ಹಾಗೂ ವಿಮಾನ ನಿಲ್ದಾಣದ ಇತರ ಅಧಿಕಾರಿಗಳು ತಕ್ಷಣ ಕ್ಷಮೆ ಕೋರಿದ್ದಾರೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News