×
Ad

ನಾನು ಬಿಜೆಪಿಯನ್ನು ತುಕ್ಡೆ-ತುಕ್ಡೆ ಮಾಡುತ್ತೇನೆ: ಕನ್ಹಯ್ಯ ಕುಮಾರ್

Update: 2021-10-01 20:27 IST

ಹೊಸದಿಲ್ಲಿ: ಈ ವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರು ತನ್ನ ವಿರುದ್ಧ ಬಿಜೆಪಿಯ ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂಬ ಹೇಳಿಕೆಗೆ ಶುಕ್ರವಾರ  ತಿರುಗೇಟು ನೀಡಿದರು. 'ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಬಹುದು ಎಂದು ದೃಢವಾಗಿ ನಂಬಿದ್ದೇನೆ. ಆ ಪಕ್ಷದ ಸೋಲನ್ನು ನಾನು ನೋಡುತ್ತೇನೆ' ಎಂದು ಹೇಳಿದರು.

"ಬಿಜೆಪಿ ನನ್ನನ್ನು 'ತುಕ್ಡೆ-ತುಕ್ಡೆ ಗ್ಯಾಂಗ್' ಎಂದು ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ 'ತುಕ್ಡೆ-ತುಕ್ಡೆ', ಹಾಗೂ ನಾನು ಬಿಜೆಪಿಯನ್ನು 'ತುಕ್ಡೆ-ತುಕ್ಡೆ' ಮಾಡುತ್ತೇನೆ. ಬಿಜೆಪಿ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸುತ್ತದೆ ಹೊರತು, ಗಾಂಧೀಜಿಯನ್ನಲ್ಲ. ಬಿಜೆಪಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಎದುರಿನಲ್ಲಿ ಮಾತ್ರ ಗಾಂಧಿಯನ್ನು ಹೊಗಳುತ್ತಾರೆ’’ ಎಂದು ಅವರು  NDTV ಗೆ ನೀಡಿದ  ಸಂದರ್ಶನವೊಂದರಲ್ಲಿ ತಿಳಿಸಿದರು.

ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಉಲ್ಲೇಖಿಸಿದ ಕನ್ಹಯ್ಯಕುಮಾರ್,  ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ  ಗೃಹ ಸಚಿವ ಅಮಿತ್ ಶಾ ಅವರನ್ನು 'ನಾಥೂರಾಮ್-ಬನಾಯಿ ಜೋಡಿ' ಎಂದು ಕರೆದರು. ಬಿಜೆಪಿ ಪಕ್ಷದ ಸಿದ್ಧಾಂತ ರಾಷ್ಟ್ರಪಿತನ ವಿರುದ್ಧ ಸಂಪೂರ್ಣ ವಿರುದ್ಧವಾಗಿದೆ ಎಂದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದಾಗ ದಿಲ್ಲಿಯ  ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ 2016 ರಲ್ಲಿ ನಡೆದ ಸಮಾರಂಭದಲ್ಲಿ 'ರಾಷ್ಟ್ರವಿರೋಧಿ' ಘೋಷಣೆಗಳನ್ನು ಕೂಗಿರುವ ಆರೋಪ ಕನ್ಹಯ್ಯಕುಮಾರ್ ವಿರುದ್ದ ಕೇಳಿಬಂದಿತ್ತು. ಆದರೆ  ಈ ಆರೋಪ ಯಾವುದೇ ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಿಲ್ಲ. ಕನ್ಹಯ್ಯ ಕುಮಾರ್ ಅವರಿಗೆ ಬಿಜೆಪಿ ಹಾಗೂ  ಅದರ ಬೆಂಬಲಿಗರು ಆಗಾಗ್ಗೆ ಪ್ರತ್ಯೇಕತಾವಾದಿ ಎಂಬ ಹಣೆಪಟ್ಟಿ ಅಂಟಿಸುತ್ತಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News