ಗಾಂಧಿ ಜಯಂತಿ: ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ ಝಿಂದಾಬಾದ್‌ʼ ಟ್ರೆಂಡಿಂಗ್‌ !

Update: 2021-10-02 08:53 GMT

ಹೊಸದಿಲ್ಲಿ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಅಹಿಂಸಾ ಮಾರ್ಗದ ಮೂಲಕ ಹೋರಾಡಿ, ದೇಶದ ಹಿರಿಮೆಯನ್ನು ವಿಶ್ವದಗಲಕ್ಕೂ ಪಸರಿಸಿದ್ದ ಅಹಿಂಸಾ ಸಾಕಾರ ಮೂರ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ನಡುವೆ ಇಂದು ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ ಝಿಂದಾಬಾದ್‌ʼ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ. ʼಹಿಂದೂ ವಿರೋಧಿ ಗಾಂದಿಯನ್ನು ಕೊಂದು ಗೋಡ್ಸೆ ಧರ್ಮವನ್ನು ಉಳಿಸಿದರುʼ ಎಂದು ಬಲಪಂಥೀಯರು ತಮ್ಮ ವಿಕೃತಿಯನ್ನು ಸಾಮಾಜಿಕ ತಾಣದಲ್ಲಿ ಮೆರೆದಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಮಹಿಳೆಯರ ಫೋಟೊದೊಂದಿಗೆ ಅಶ್ಲೀಲವಾಗಿ ಚಿತ್ರಿಸಿ ಕೆಲವರು ಪೋಸ್ಟ್‌ ಮಾಡಿದ್ದರೆ, ಇನ್ನಿತರರು ಗೋಡ್ಸೆಯನ್ನು ಮಹಾನುಭಾವ ಎಂಬಂತೆ ಬಿಂಬಿಸಿ ಗಾಂಧೀಜಿಯನ್ನು ವ್ಯಂಗ್ಯವಾಡಿದ್ದಾರೆ. "ಬಿಜೆಪಿ ಆಡಳಿತಕ್ಕೆ ಬರುವವರೆಗೂ ನಮಗೆ ಲಾಲ್‌ ಬಹದ್ದೂರ್‌ ಶಾಸ್ತ್ರಿಯ ಜನ್ಮದಿನ ತಿಳಿದೇ ಇರಲಿಲ್ಲ. ಇಂದು ಗಾಂಧಿಯನ್ನು ಆಚರಿಸುವ ಬದಲು ಶಾಸ್ತ್ರಿಯ ಜನ್ಮದಿನ ಆಚರಿಸಬೇಕು" ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

ಮಹಾತ್ಮಾ ಗಾಂಧಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಾಥೂರಾಮ ಗೋಡ್ಸೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಹೆಸರಿಸಲ್ಪಟ್ಟಿದ್ದ ಸಾವರ್ಕರ್‌ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಬಲಪಂಥೀಯ ಮನಸ್ಥಿತಿಯ ವ್ಯಕ್ತಿಗಳು ವಿಕೃತಿ ಮೆರೆಯುತ್ತಿರುವ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News