ದುರ್ಬಲ ಗಣರಾಜ್ಯ ಸ್ಥಾಪನೆಯೊಂದಿಗೆ ಸರ್ವಾಧಿಕಾರ ವ್ಯವಸ್ಥೆಗೆ ಹುನ್ನಾರ: ಪ್ರೊ.ಫಣಿರಾಜ್

Update: 2021-10-02 14:41 GMT

ಉಡುಪಿ, ಅ.2: ಕೇಂದ್ರ ಪ್ರಭುತ್ವವು ದುರ್ಬಲವಾಗಿ ಹಾಗೂ ಗಣರಾಜ್ಯ ವ್ಯವಸ್ಥೆ ಸಂಪೂರ್ಣವಾಗಿ ಬಲಯುತವಾಗಬೇಕೆಂಬುದು ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಪ್ರಬಲವಾದ ಕೇಂದ್ರವನ್ನು ಮತ್ತು ದುರ್ಬಲವಾದ ಗಣರಾಜ್ಯವನ್ನು ಸ್ಥಾಪಿಸುವ ದೊಡ್ಡ ರಾಜಕೀಯ ಹುನ್ನಾರ ನಡೆಯುತ್ತಿದೆ. ಕೇಂದ್ರೀಕೃತವಾದ ಹಾಗೂ ಸರ್ವಾಧಿಕಾರ ವ್ಯವಸ್ಥೆಯನ್ನು ವಿವಿಧ ಕಾಯಿದೆ, ಕಾನೂನು, ಮಸೂದೆಗಳ ಮೂಲಕ ತರಲಾಗುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ವೇದಿಕೆಯ ಕಚೇರಿಯಲ್ಲಿ ಆಯೋಜಿಸಲಾದ ಕಾರ್ುಕ್ರಮದಲ್ಲಿ ಉಪನ್ಯಾಸ ನೀಡಿದರು.

ಗಾಂಧಿ ಎಂದಿಗೂ ಪಶ್ಚಿಮದ ಮಾದರಿಯ ಪ್ರಭುತ್ವದಲ್ಲಿ ನಂಬಿಕೆ ಇಟ್ಟು ಕೊಂಡಿರಲಿಲ್ಲ. ಭಾರತ ಗ್ರಾಮ ಸಮುದಾಯವಾಗಿಯೇ ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ಇಂದಿನ ರಾಜಕೀಯ ನಡೆಯಿಂದ ಗಣ ರಾಜ್ಯ ಗಳು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದೆ. ಕೇಂದ್ರ ಪ್ರಭುತ್ವದಿಂದಲೇ ಭಾರತದ ರಕ್ಷಣೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದು ಗಾಂಧೀಜಿ ಕಲ್ಪನೆಯ ಪ್ರಭುತ್ವಕ್ಕೆ ಅತ್ಯಂತ ವ್ಯತಿರಿಕ್ತವಾದುದು ಎಂದರು.

ಈ ಸರ್ವಾಧಿಕಾರದ ವ್ಯವಸ್ಥೆಗೆ ಯಾವುದೇ ಸಾಮಾಜಿಕ ಹಾಗೂ ರಾಜಕೀಯ ಪ್ರತಿರೋಧಗಳು ವ್ಯಕ್ತವಾಗುತ್ತಿಲ್ಲ. ಸಾಮಾನ್ಯ ಪ್ರಜೆಗಳು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದೆ ಭಾರತದಲ್ಲಿ ಗಣತಂತ್ರ, ಗ್ರಾಮ ಸ್ವರಾಜ್ಯ ವ್ಯವಸ್ಥೆಗೆ ಸ್ಥಾನ ಇರುವುದಿಲ್ಲ. ಅಲ್ಲದೆ ಬೀದಿಗೆ ಇಳಿದು ಮಾಡುವ ಹೋರಾಟಕ್ಕೂ ಅವಕಾಶ ಇರುವುದಿಲ್ಲ. ಹಾಗಾಗಿ ನಾವು ಗಾಂಧಿವಾದ ಮತ್ತು ಚಳವಳಿಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ವಸಾಹತುಶಾಹಿ ವ್ಯವಸ್ಥೆಯನ್ನು ಜನ ಹೋರಾಟದಿಂದ ಹೊರಗಟ್ಟಿ ಮುಂದೆ ತಮ್ಮಗೆ ಬೇಕಾದ ರೀತಿಯಲ್ಲಿ ಪ್ರಭುತ್ವವನ್ನು ಕಟ್ಟಿದ ನೆಲವಾಗಿ ಭಾರತದಲ್ಲಿ ಇಂದು ಪ್ರಭುತ್ವ ಪ್ರಿಯವಾದ ಗಾಂಧಿ ಇರುವುದು ದೊಡ್ಡ ರಾಜಕೀಯ ಹಾಗೂ ಸಾಮಾಜಿಕ ಅಪಾಯವಾಗಿದೆ. ನಾವು ಹೊಸದಾಗಿ ಬೀದಿಯಲ್ಲಿ ಚಳವಳಿ ಮಾಡುವ ಗಾಂಧಿಯನ್ನು ಕಲ್ಪಿಸದೆ ಹೋದರೆ ಹಾಗೂ ಗಾಂಧಿ ಹಾಗೂ ಅವರ ವಿಚಾರವನ್ನು ಪ್ರಭುತ್ವದ ಗಾಂಧಿಗೆ ಭಿನ್ನವಾಗಿ ನಿಲ್ಲಿಸದಿದ್ದರೆ ಭಾರತದಲ್ಲಿ ರಾಜಕೀಯ ಚಿಂತನೆಗೆ ಅವಕಾಶ ಇಲ್ಲದ ರೀತಿಯ ಭೀಕರ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

‘ದೆಹಲಿಯ ರೈತ ಹೋರಾಟದಲ್ಲಿ ಗಾಂಧಿ’

ಗಾಂಧಿಯ ಕಾಲಕ್ಕಿಂತ ಹೆಚ್ಚು ಸಫಲ ಹಾಗೂ ಪರಿಣಾಮಕಾರಿಯಾಗಿ ದೆಹಲಿ ಯಲ್ಲಿ ಕಳೆದ 11ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಗಾಂಧಿ ಯನ್ನು ಕಾಣದಿದ್ದರೆ ಭಾರತ ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಲಿದೆ. ಇಲ್ಲಿ ಒಬ್ಬ ಗಾಂಧಿಯಲ್ಲ, ಸಾಮೂಹಿಕ ನಾಯಕತ್ವದ ಗಾಂಧಿಯನ್ನು ಕಾಣುತ್ತಿದ್ದೇವೆ. ಜೈಲಿನಲ್ಲಿರುವ ಚಳವಳಿಗಾರರು, ರೈತರ ಹೋರಾಟಗಾರರಲ್ಲಿ ಪ್ರಭುತ್ವ ಗಾಂಧಿಗೆ ವಿರುದ್ಧವಾದ ಚಳವಳಿಗಾರ ಗಾಂಧಿಯನ್ನು ಕಾಣುತ್ತಿದೆ್ದೀವೆಂದು ಪ್ರೊ.ಫಣಿರಾಜ್ ತಿಳಿಸಿದರು.

ರಾಜದ್ರೋಹ ಸೇರಿದಂತೆ ಇತರ ಕಠಿಣ ಕಾನೂನಿನ ಮೂಲಕ ಜೈಲಿನಲ್ಲಿರುವ ಹೋರಾಟಗಾರ ಜೀನವ ಮತ್ತು ಕಾರ್ಯಾಚರಣೆಗೂ ಗಾಂಧೀಜಿಯ ಹೋರಾಟಕ್ಕೂ ಸಾಕಷ್ಟು ಸಾಮ್ಯತೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಗಾಂಧಿ ವಸಹಾತು ಶಾಹಿ ಮುಳುವರದೆ, ಈ ಚಳವಳಿಗಾರರು ಇಂದಿನ ಪ್ರಭುತ್ವಕ್ಕೆ ಮುಳ್ಳಾಗಿರುವುದನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News