'ಎಸ್ಸಿ/ಎಸ್ಟಿ ಕಾಯ್ದೆ ಪ್ರಕರಣಗಳಲ್ಲಿ ಮಾಜಿ ಮುಂಬೈ ಪೊಲೀಸ್ ಆಯುಕ್ತರನ್ನು ಅ.21ರವರೆಗೆ ಬಂಧಿಸುವುದಿಲ್ಲ'
ಮುಂಬೈ,ಅ.2: ಥಾಣೆ ಪೊಲೀಸರು ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ತನ್ನ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಅ.20ಕ್ಕೆ ಮುಂದೂಡಿದೆ.
ಅ.21ರವರೆಗೆ ತಾನು ಸಿಂಗ್ ಅವರನ್ನು ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರವು ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಿಳಿಸಿತು.
ಪೊಲೀಸ್ ಇನ್ಸ್ಪೆಕ್ಟರ್ ಭೀಮರಾವ್ ಘಾಡ್ಗೆ ಅವರ ದೂರಿನ ಮೇರೆಗೆ ಥಾಣೆ ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆ,ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಸಿಂಗ್ ಮತ್ತು ಇತರ 32 ಜನರ ವಿರುದ್ಧ ಐದು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಸಿಂಗ್ 2015ರಲ್ಲಿ ಥಾಣೆ ಪೊಲೀಸ್ ವರಿಷ್ಠರಾಗಿದ್ದಾಗ ಎಫ್ಐಆರ್ಗಳು ದಾಖಲಾಗಿದ್ದ ಕೆಲವು ವ್ಯಕ್ತಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಂತೆ ತನಗೆ ಸೂಚಿಸಿದ್ದರು ಮತ್ತು ತಾನು ಅವರ ಆದೇಶವನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ತನ್ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಎಂದು ಘಾಡ್ಗೆ ಆರೋಪಿಸಿದ್ದರು. ಘಾಡ್ಗೆ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರಾದರೂ ಅದು ಅವರಿಗೆ ಪರಿಹಾರವನ್ನು ಒದಗಿಸಿರಲಿಲ್ಲ. 2018ರಲ್ಲಿ ಅವರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ರಾಜ್ಯದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ವಿರುದ್ಧದ ತನ್ನ ಭ್ರಷ್ಟಾಚಾರ ಆರೋಪಗಳನ್ನು ಹಿಂದೆಗೆದುಕೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲು ಮಹಾರಾಷ್ಟ್ರ ಸರಕಾರವು ಈ ಪ್ರಕರಣಗಳ ಬೆಂಬತ್ತಿದೆ ಎಂದು ಸಿಂಗ್ ಹೇಳಿದ್ದರು.