ಅಧಿಕಾರವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಗಡ್ಕರಿ ತೋರಿಸಿದ್ದಾರೆ: ಶರದ್ ಪವಾರ್ ಪ್ರಶಂಸೆ‌

Update: 2021-10-02 18:06 GMT

ಅಹ್ಮದ್‌ನಗರ(ಮಹಾರಾಷ್ಟ್ರ),ಅ.2: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅಭಿವೃದ್ಧಿ ಕಾರ್ಯಗಳಿಗಾಗಿ ಅಧಿಕಾರವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದನ್ನು ತೋರಿಸಿದ್ದಾರೆ ಎಂದು ಎನ್‌ಸಿಪಿ ವರಿಷ್ಠ ಶರದ ಪವಾರ್ ಅವರು ಶನಿವಾರ ಇಲ್ಲಿ ಪ್ರಶಂಸಿಸಿದರು. 

ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದ ಅವರು ‘ನಗರದಲ್ಲಿ ದೀರ್ಘಕಾಲದಿಂದ ಬಾಕಿಯುಳಿದಿರುವ ಸಮಸ್ಯೆಗಳನ್ನು ಪರಿಹರಿಸಬಲ್ಲ ಹಲವಾರು ಯೋಜನೆಗಳನ್ನು ಗಡ್ಕರಿ ಉದ್ಘಾಟಿಸಲಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ನನ್ನ ಉಪಸ್ಥಿತಿಯನ್ನು ಬಯಸಿದ್ದಾರೆ ಎಂದು ನನಗೆ ತಿಳಿಸಲಾಗಿತ್ತು. ಹೀಗಾಗಿ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಯೋಜನೆಗಾಗಿ ಶಿಲಾನ್ಯಾಸ ಸಮಾರಂಭ ನಡೆದ ಬಳಿಕ ಹೆಚ್ಚಿನ ಪ್ರಕರಣಗಳಲ್ಲಿ ಯಾವುದೇ ಪ್ರಗತಿಯಾಗದಿರುವುದನ್ನು ನಾವು ನೋಡಿದ್ದೇವೆ. ಆದರೆ ಗಡ್ಕರಿಯವರ ಯೋಜನೆಗಳು ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಕಾಮಗಾರಿಗಳು ಆರಂಭಗೊಳ್ಳುತ್ತವೆ. ಜನ ಪ್ರತಿನಿಧಿಯೋರ್ವರು ದೇಶದ ಅಭಿವೃದ್ಧಿಗಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದಕ್ಕೆ ಗಡ್ಕರಿ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ’ ಎಂದರು.

ಗಡ್ಕರಿಯವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಮುನ್ನ ಸುಮಾರು 5,000 ಕಿ.ಮೀ.ಗಳಷ್ಟು ಹೆದ್ದಾರಿ ಕಾಮಗಾರಿ ನಡೆದಿತ್ತು ಎನ್ನುವುದು ತನಗೆ ನೆನಪಿದೆ. ಆದರೆ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಅದೀಗ 12,000 ಕಿ.ಮೀ.ದಾಟಿದೆ ಎಂದು ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News