ಚೀನಾ ಸೇನೆ ನಿಯೋಜನೆ ಹೆಚ್ಚಳ ಆತಂಕಕಾರಿ: ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ

Update: 2021-10-03 05:27 GMT
ಎಂ.ಎಂ.ನರವಣೆ (ಫೋಟೊ : PTI)

ಹೊಸದಿಲ್ಲಿ: ಭಾರತ- ಚೀನಾ ಗಡಿಯುದ್ದಕ್ಕೂ ಚೀನಾದ ಸೇನಾ ನಿಯೋಜನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಹೇಳಿದ್ದಾರೆ.

ಉಭಯ ದೇಶಗಳ ಮಿಲಿಟರಿ ಕಮಾಂಡರ್‌ಗಳ ಮುಂದಿನ ಸಭೆಗೆ ಮುನ್ನ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿರುವುದು ವಿಶೇಷ ಮಹತ್ವ ಪಡೆದಿದೆ. ಆದರೆ ಪೂರ್ವ ಲಡಾಖ್‌ನ 17 ತಿಂಗಳ ಸಂಘರ್ಷ ಶೀಘ್ರವೇ ಕೊನೆಗೊಳ್ಳಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ 13ನೇ ಸುತ್ತಿನ ಮಾತುಕತೆ ಮುಂದಿನ ವಾರ ನಡೆಯುವ ನಿರೀಕ್ಷೆ ಇದೆ. ಏತನ್ಮಧ್ಯೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗಡಿಯುದ್ದಕ್ಕೂ ತನ್ನ ಸೇನಾ ನೆಲೆಗಳನ್ನು ಕ್ರೋಢೀಕರಿಸಿಕೊಳ್ಳುತ್ತಿದೆ. ದೊಡ್ಡ ಶಸ್ತ್ರಾಸ್ತಗಳು ಮತ್ತು ಭಾರತಕ್ಕೆ ಮುಖ ಮಾಡಿ ಇರುವ ವಾಯು ನೆಲೆಗಳನ್ನು ಮೇಲ್ದರ್ಜೆಗೇರಿಸಿಕೊಳ್ಳುತ್ತಿದ್ದು, ಇದು ಭಾರತದ ಬದಿಯಲ್ಲಿ ಕೂಡಾ ಅದಕ್ಕೆ ತಕ್ಕಂತೆ ನಿಯೋಜನೆಗೆ ಕಾರಣವಾಗಿದೆ.

ಲೆಹ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜನರಲ್ ನರವಣೆ, "ಪೂರ್ವ ಲಡಾಖ್‌ನಿಂದ ಅರುಣಾಚಲ ಪ್ರದೇಶವರೆಗೆ 3488 ಕಿಲೋ ಮೀಟರ್ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಮುಂಚೂಣಿ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯ ಪಿಎಲ್‌ಎ ನಿಯೋಜನೆಯು ನಮಗೆ ಆತಂಕಕಾರಿ ವಿಷಯವಾಗಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News