×
Ad

ವಾಣಿಜ್ಯ ಸ್ವರೂಪ ಪಡೆದುಕೊಂಡ ಗಾಂಜಾ ದಂಧೆ?

Update: 2021-10-03 10:44 IST

ಶಿವಮೊಗ್ಗ, ಅ.3: ಎರಡು ದಶಕಗಳಿಂದ ನಿಯಂತ್ರಣಕ್ಕೆ ಸಿಗದ ಗಾಂಜಾ ದಂಧೆ ಈಗ ವಾಣಿಜ್ಯ ಸ್ವರೂಪ ಪಡೆದುಕೊಂಡಿದ್ದು, ಅಪರಾಧ ಕೃತ್ಯಗಳಿಗೆ ಮೂಲವಾಗಿದೆ.

ಶಿವಮೊಗ್ಗ-ಭದ್ರಾವತಿ-ಶಿಕಾರಿಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ನಗರ ಬೆಳೆದಂತೆ ಗಾಂಜಾ ಮಾರಾಟ ವ್ಯಾಪ್ತಿಯೂ ಹೆಚ್ಚಾಗುತ್ತಿದೆ. ವ್ಯಾಪಾರದ ಸೋಗಿನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ.ಮಲೆನಾಡಿನ ರೈತರು ಅರಿವಿದ್ದೋ, ಅರಿವಿಲ್ಲದೆಯೋ ಹಣದಾಸೆಗೆ ಬಿದ್ದು,ಕೃಷಿ ಬೆಳೆ ಜೊತೆ ಉಪ ಬೆಳೆಯಾಗಿ ಗಾಂಜಾವನ್ನು ಬೆಳೆಯಲಾಗುತ್ತಿದೆ. ಹೊಲದಲ್ಲಿ ಹತ್ತಿಪ್ಪತ್ತು ಗಿಡದಿಂದ ಹಿಡಿದು ನೂರಾರು ಗಿಡಗಳವರೆಗೆ ಪೋಷಿಸಲಾಗುತ್ತಿದೆ. ಈ ಬೆಳೆಯ ಹಿಂದೆ ವ್ಯವಸ್ಥಿತ ಜಾಲವೇ ಇರುವುದು ಆತಂಕಕಾರಿ ವಿಷಯ. ಪೊಲೀಸರು, ಅಬಕಾರಿ ಅಧಿಕಾರಿಗಳು ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೆ ಭೇದಿಸುತ್ತಿದ್ದಾರೆ. ಗಾಂಜಾದ ಮೂಲ ಪತ್ತೆ ಇದುವರೆಗೂ ಸಾಧ್ಯವಾಗಿಲ್ಲರುವುದು ವಿಪರ್ಯಾಸವೇ ಸರಿ.

ಮಧ್ಯವರ್ತಿಗಳಿಂದ ಗಾಂಜಾ ಬೀಜ ಪೂರೈಕೆ: ಜಿಲ್ಲೆಯ ಕಾಡಿನಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲವು ಮಧ್ಯ ವರ್ತಿಗಳು ಗಾಂಜಾ ಬೀಜಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಗಾಂಜಾ ಬೆಳೆದ ಬಳಿಕ ತಾವೇ ಖರೀದಿಸುತ್ತಿದ್ದಾರೆ. ಹಣದಾಸೆಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಯೋಚಿಸದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆ ಜೋಳದ ನಡುವಿನಲ್ಲಿ ಗುಟ್ಟಾಗಿ ಬೆಳೆಯುತ್ತಿದ್ದಾರೆ. ಯಾರ ಕಣ್ಣಿಗೂ ಸಿಗದೆ ವ್ಯವಹಾರ ಪೂರೈಸಿಕೊಂಡು ಕಾಸು ಮಾಡಿೊಳ್ಳುವ ಸಾಕಷ್ಟು ಮಂದಿ ಇದ್ದಾರೆ.

 ಆದರೆ, ಕೆಲವರು ಅಬಕಾರಿ ಅಧಿಕಾರಿಗಳು, ಪೊಲೀಸರ ಕೈಗೆ ಸಿಕ್ಕು ಜೈಲು ಪಾಲಾಗಿ, ತಮ್ಮನ್ನೇ ನಂಬಿಕೊಂಡ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದ್ದಾರೆ.

ಅಪರಾಧದ ಜೊತೆ ಗಾಂಜಾ ನಂಟು: ನಗರದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದರು ಎಂಬ ಅಂಶ ಗಂಭೀರವಾದುದು. ಗಾಂಜಾ ಮತ್ತಿನಲ್ಲಿ ಆರೋಪಿಗಳು ಹಲ್ಲೆ, ಕೊಲೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಈಚೇಗೆ ಗಾಂಜಾ ಸೇವೆ ಮಾಡಿ ಹಲ್ಲೆ ನಡೆದಿದ್ದ ಯುವಕರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದರು. ಯುವಕರು ಹಾಡು ಹಗಲೇ ಲಾಂಗು, ಮಚ್ಚು ಹಿಡಿದುಕೊಂಡು ದರೋಡೆಗಿಳಿದಿದ್ದರು.

ಒಣ ಗಾಂಜಾವನ್ನು ಚೀಲಗಟ್ಟಲೆ ಸಾಗಣಿ ಮಾಡುವುದಕ್ಕೆ ಶಿವ ಮೊಗ್ಗ ಮಂಡಗದ್ದೆಯ ಮಾರ್ಗವನ್ನು ಪೆಡ್ಲರ್‌ಗಳು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಮೀನು ಹೋಟೆಲ್‌ಗಳೇ ಪೆಡ್ಲರ್‌ಗಳಿಗೆ ಗಾಂಜಾ ವಿನಿ ಮಯಕ್ಕೆ ಪ್ರಮುಖ ಅಡ್ಡೆಗಳಾಗಿವೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಹಿಂಭಾಗದ ಬೈಪಾಸ್ ರಸ್ತೆ, ಸೂಳೆಬೈಲು, ಟಿಪ್ಪುನಗರ, ಆರ್‌ಎಂಎಲ್ ನಗರ, ಅಣ್ಣಾ ನಗರ, ತುಂಗಾ ನಗರ, ಬುದ್ದನಗರ ಹೀಗೆ ಹಲವು ಬಡಾವಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಎಗ್ಗಿಲ್ಲದೆ ನಡೆಯುತ್ತಿದೆ. ಒಟ್ಟಿನಲ್ಲಿ ಮಲೆನಾಡಿನಲ್ಲಿ ಗಾಂಜಾ ದಂಧೆ ಜೋರಾಗಿ ನಡೆ ಯುತ್ತಿದೆ.ಅಲ್ಲೊಂದು ಇಲ್ಲೊಂದು ಕೇಸ್ ದಾಖಲಾಗುತ್ತಿದೆ. ಆದರೆ ಗಾಂಜಾ ದಂದೆಕೋರರು ಹಾಗೂ ಬೆಳೆಗಾರರನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗಾಂಜಾ ವ್ಯಸನಿಗಳನ್ನು ಪತ್ತೆ ಹಚ್ಚಲು ಟೆಸ್ಟಿಂಗ್ ಕಿಟ್‌ಗಳು ಮೆಗ್ಗಾನ್‌ಗೆ ಬಂದಿದೆ. ಇದರಿಂದ ಗಾಂಜಾ ಸೇವಿಸುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗುವುದು. ನಗರ ಪ್ರದೇಶದಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗುವುದು. ಗಾಂಜಾ ಪೆಡ್ಲರ್‌ಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.

ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ಶರತ್ ಕುಮಾರ್

contributor

Editor - ಶರತ್ ಕುಮಾರ್

contributor

Similar News