ಉತ್ತರಪ್ರದೇಶ:ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ ಕೇಂದ್ರ ಸಚಿವರ ಪುತ್ರ; ಇಬ್ಬರು ಬಲಿ

Update: 2021-10-03 15:37 GMT
photo: twitter

ಲಖಿಂಪುರ ಖೇರಿ,ಅ.3: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರವಿವಾರ ಕೇಂದ್ರದ ಸಹಾಯಕ ಗೃಹಸಚಿವ ಅಜಯ ಮಿಶ್ರಾ ಅವರ ಪುತ್ರ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ್ದಾಗಿ ಆರೋಪಿಸಲಾಗಿದ್ದು,ಈ ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ. ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೈತರ ಸಾವಿನ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಿಶ್ರಾ ಅವರ ಸ್ವಗ್ರಾಮ ಲಖಿಂಪುರ ಕೇರಿಯ ಟಿಕುನಿಯಾದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಮಿಶ್ರಾ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು,ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಅವರು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದರು. ಮೌರ್ಯ ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಲು ರೈತರು ಆಯೋಜಿಸಿದ್ದರು. ಮೌರ್ಯರನ್ನು ಬರಮಾಡಿಕೊಳ್ಳಲು ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಕಾರಿನಲ್ಲಿ ತೆರಳುತ್ತಿದ್ದಾಗರೈತರು ಅದನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಆಶಿಷ್ ಪ್ರತಿಭಟನಾನಿರತರ ಮೇಲೆ ಕಾರು ಚಲಾಯಿಸಿದ್ದಾಗಿ ಹೇಳಲಾಗಿದೆ. ಘಟನೆಯಲ್ಲಿ ಇಬ್ಬರಲ್ಲ,ಮೂವರು ರೈತರು ಮೃತಪಟ್ಟಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಹೇಳಿದೆ.

ಕಾರುಗಳ ದಹನ

ಘಟನೆಯಿಂದ ಕ್ರುದ್ಧ ರೈತರು ಮೂರು ಕಾರುಗಳನ್ನು ಸುಟ್ಟುಹಾಕಿದ್ದು, ಇವುಗಳಲ್ಲಿ ಆಶಿಷ್ ಕಾರೂ ಸೇರಿದೆ. ಟಿಕುನಿಯಾದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ.

ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ನಿರ್ದೇಶದಂತೆ ಎಡಿಜಿಪಿ ಪ್ರಶಾಂತ್ ಕುಮಾರ್ ಮತ್ತು ಲಕ್ನೋ ವಲಯದ ಐಜಿಪಿ ಲಕ್ಷ್ಮಿ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ರವಾನಿಸಲಾಗಿದ್ದು,ಇತರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಲಖಿಂಪುರ ಖೇರಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ. ಯಾವುದೇ ವಿಧದ ಚಟುವಟಿಕೆಗಳ ಮೇಲೆ ನಿಕಟ ನಿಗಾಯಿರಿಸುವಂತೆ ಸೂಚಿಸಲಾಗಿದೆ ಎಂದು ಡಿಜಿಪಿ ಮುಕುಲ್ ಗೋಯಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಕೆಯು ನಾಯಕ ರಾಕೇಶ್ ಟಿಕಾಯತ್ ಅವರೂ ಟಿಕುನಿಯಾಕ್ಕೆ ಧಾವಿಸಿದ್ದಾರೆ. ಬಿಕೆಯು (ಚಧುನಿ)ನಾಯಕ ಗುರ್ನಾಮ್ ಸಿಂಗ್ ಚಧುನಿ ಅವರು ಟಿಕುನಿಯಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವಂತೆ ರೈತರಿಗೆ ಕರೆ ನೀಡಿದ್ದಾರೆ.

ಪ್ರತಿಪಕ್ಷ ನಾಯಕರ ಖಂಡನೆ

ಘಟನೆಯನ್ನು ಖಂಡಿಸಿದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೃಷಿ ಕಾಯ್ದೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದ ರೈತರೊಂದಿಗೆ ಕೇಂದ್ರ ಸಹಾಯಕ ಗೃಹಸಚಿವರು ನಡೆದುಕೊಂಡಿರುವ ರೀತಿಯು ಅತ್ಯಂತ ಅಮಾನವೀಯ ಮತ್ತು ಕ್ರೂರವಾಗಿದೆ ಎಂದರು. ಕಾಂಗ್ರೆಸ್ ಕೂಡ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ರೈತರು ಕಾರುಗಳನ್ನು ಸುಡುತ್ತಿರುವ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು,‌ ಬಿಜೆಪಿಯು ಹಿಟ್ಲರ್ ನಂತೆ ವರ್ತಿಸಿ ಪ್ರತಿಭಟನೆಗಳನ್ನು ದಮನಿಸುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ನೇರ ದಾಳಿಯನ್ನು ನಡೆಸಿದ ಆರ್ಎಲ್ಡಿ ಅಧ್ಯಕ್ಷ ಜಯಂತ ಚೌಧರಿ,ರೈತರ ಪ್ರತಿಭಟನೆಯನ್ನು ದಮನಿಸಲು ಗೃಹಸಚಿವರು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆಪ್ ನಾಯಕ ಸಂಜಯ ಸಿಂಗ್ ಅವರು ಘಟನೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಸುಹಲದೇವ್ ಭಾರತೀಯ ಸಮಾಜ ಪಾರ್ಟಿಯ ಸ್ಥಾಪಕ ಓಂ ಪ್ರಕಾಶ ರಾಹಭರ್ ಅವರೂ ಘಟನೆಯನ್ನು ಖಂಡಿಸಿ ಬಿಜೆಪಿಯನ್ನು ತರಾಟೆಗೆತ್ತಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News