×
Ad

ಲಾತೆಹಾರ್ ಜಿಲ್ಲೆಯ ಗ್ರಾಮಸ್ಥರಿಂದ ಕಾನೂನು ಹೋರಾಟಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ ನಿಧಿ ಸಂಗ್ರಹ

Update: 2021-10-03 20:11 IST
photo: telegraphindia.com

ರಾಂಚಿ, ಅ.3: ಜಾರ್ಖಂಡ್ ನ ಲಾತೆಹಾರ್ ಜಿಲ್ಲೆಯ ಪಿರಿ ಗ್ರಾಮದ ನಿವಾಸಿಗಳು ಮಾವೋವಾದಿಯೆಂಬ ಆರೋಪದಲ್ಲಿ ಭದ್ರತಾ ಪಡೆಗಳಿಂದ ಗ್ರಾಮಸ್ಥನೋರ್ವನ ಹತ್ಯೆಯ ವಿರುದ್ಧ ಕಾನೂನು ಹೋರಾಟಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ ಸುಮಾರು 20,000 ರೂ.ಗಳನ್ನು ಸಂಗ್ರಹಿಸಿದ್ದಾರೆ.

ಗ್ರಾಮಸ್ಥರು ಹತ ಬ್ರಹ್ಮದೇವ ಸಿಂಗ್ ನ ವಿಧವೆ ಪತ್ನಿ ಜಿರಾಮಣಿ ದೇವಿ ಹೆಸರಿನಲ್ಲಿ ಸೋಮವಾರ ಲಾತೆಹಾರ್ ನ ಸಿಜೆಎಂ ನ್ಯಾಯಾಲಯದಲ್ಲಿ ದೂರು ಅರ್ಜಿಯನ್ನು ಸಲ್ಲಿಸಲಿದ್ದಾರೆ. ದಾಖಲಾತಿ ಮತ್ತು ತನಿಖೆಗಾಗಿ ನ್ಯಾಯಾಲಯವು ದೂರು ಅರ್ಜಿಯನ್ನು ಗಾರು ಪೊಲೀಸ್ ಠಾಣೆಗೆ ಕಳುಹಿಸಲಿದೆ ಎಂದು ವಕೀಲ ಬಿರ್ಸಾ ಮುಂಡಾ ತಿಳಿಸಿದರು.
 
ಪಿರಿ ಗ್ರಾಮದಲ್ಲಿ ಸುಮಾರು 100 ಕುಟುಂಬಗಳು ವಾಸವಾಗಿವೆ. ಅಲ್ಲಿಯ ನಿವಾಸಿಗಳು ಗ್ರಾಮಸ್ಥರಿಂದ ದೇಣಿಗೆಗಳನ್ನು ಕೋರಿ ಪತ್ರವೊಂದನ್ನು ಸಿದ್ಧಪಡಿಸಿದ್ದರು ಮತ್ತು ಅದರ ಪ್ರತಿಗಳನ್ನು ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ ಪ್ರದರ್ಶಿಸಿದ್ದರು. ದೇಣಿಗೆಗಳ ಮೂಲಕ 30,000 ರೂ.ಗಳನ್ನು ಸಂಗ್ರಹಿಸಲು ಅವರು ಉದ್ದೇಶಿಸಿದ್ದರು.

‘ತನ್ನ ಪತಿಯ ಸಾವಿಗೆ ಕಾರಣರಾಗಿದ್ದ ಭದ್ರತಾ ಪಡೆಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಜಿರಾಮಣಿ ದೇವಿ ಜೂ.29ರಂದು ಗಾರು ಪೊಲೀಸ್ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ. ನಾವು ಠಾಣೆಗೆ ತೆರಳಿ ವಿಚಾರಿಸಿದಾಗೆಲ್ಲ ನಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆಯನ್ನು ಒಡ್ಡಲಾಗುತ್ತಿದೆ. ನಮಗೆ ನ್ಯಾಯಾಲಯದ ಮೊರೆ ಹೋಗದೇ ಅನ್ಯಮಾರ್ಗವುಳಿದಿಲ್ಲ. ಆದರೆ ಕಾನೂನು ಮತ್ತು ಪ್ರಯಾಣ ವೆಚ್ಚಕ್ಕಾಗಿ ನಮಗೆ ಹಣದ ಅಗತ್ಯವಿದೆ (ಪಿರಿಯಿಂದ ಲಾತೆಹಾರ್ 78 ಕಿ.ಮೀ.ದೂರವಿದೆ)’ ಎಂದು ಗ್ರಾಮದ ಭೂರಹಿತ ರೈತ ಬಿಶ್ವೇಶ್ವರ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.

ಪೊಲೀಸರು ಎಫ್ಐಆರ್ ದಾಖಲಿಸದಿರುವುದು ವ್ಯಕ್ತಿಯೋರ್ವನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ. ಅಮಾಯಕ ಗ್ರಾಮಸ್ಥರ ನಕಲಿ ಎನ್ಕೌಂಟರ್ ಗಾಗಿ ಭದ್ರತಾ ಪಡೆಗಳ ವಿರುದ್ಧ ಕ್ರಮವನ್ನು ಕೋರಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಪತ್ರವನ್ನು ಬರೆದಿದ್ದೇವೆ ಎಂದು ಜಾರ್ಖಂಡ್ ಜನಾಧಿಕಾರ ಮಹಾಸಭಾದ ಸದಸ್ಯ ಸಿರಾಜ್ ದತ್ತಾ ತಿಳಿಸಿದರು.
 ‌
ಜೂನ್ 2ರಂದು ಬ್ರಹ್ಮದೇವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಹಾಸಭಾದ ನೇತೃತ್ವದಲ್ಲಿ ಜೂ.12ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಕಾರ್ಯಕರ್ತರ ತಂಡವು ‘ಅಮಾಯಕ ಗ್ರಾಮಸ್ಥರು ಸಿಂಗಲ್ ಶಾಟ್ ನಾಡಬಂದೂಕುಗಳೊಂದಿಗೆ ವಾರ್ಷಿಕ ಬೇಟೆ ಉತ್ಸವದಲ್ಲಿ ಭಾಗಿಯಾಗಿದ್ದಾಗ ಭದ್ರತಾ ಪಡೆಗಳು ಅವರ ಮೇಲೆ ಗುಂಡು ಹಾರಿಸಿದ್ದವು. ಬ್ರಹ್ಮದೇವನನ್ನು ಅರಣ್ಯದ ಅಂಚಿಗೆ ಎಳೆದೊಯ್ದು ಮೂರು ಸಲ ಗುಂಡಿಕ್ಕಿ ಕೊಲ್ಲಲಾಗಿತ್ತು’ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ವರದಿಯ ಪ್ರತಿಯನ್ನು ಲಾತೆಹಾರ್ ಜಿಲ್ಲಾಧಿಕಾರಿ ಅಬು ಇಮ್ರಾನ್ ಅವರಿಗೂ ಸಲ್ಲಿಸಲಾಗಿತ್ತು.
 
ಪೊಲೀಸರ ಗುಂಡೇಟಿನಿಂದ ಬ್ರಹ್ಮದೇವ ಸಾವನ್ನಪ್ಪಿರುವುದನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿಲ್ಲ. ಸಶಸ್ತ್ರ ಗ್ರಾಮಸ್ಥರು ಮೊದಲು ಗುಂಡು ಹಾರಿಸಿದ್ದು,ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಗುಂಡಿನ ಕಾಳಗದಲ್ಲಿ ಬ್ರಹ್ಮದೇವ ಸಾವು ಸಂಭವಿಸಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಅವರ ಶವ ಅರಣ್ಯದಂಚಿನಲ್ಲಿ ಪತ್ತೆಯಾಗಿತ್ತು ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ತಂಡವು ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ. ಬ್ರಹ್ಮದೇವ್ ಸೇರಿದಂತೆ ಆರು ಆದಿವಾಸಿಗಳ ವಿರುದ್ಧ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಕಲಮ್ಗಳಡಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದೂ ವರದಿಯು ತಿಳಿಸಿದೆ.
 
ಗ್ರಾಮಸ್ಥರಿಗೆ ನೆರವಾಗುತ್ತಿರುವ ಅಖಿಲ ಜಾರ್ಖಂಡ್ ಖಿರ್ವಾರ್ ಜನಸಭಾ ವಿಕಾಸ ಪರಿಷದ್ ನ ಸದಸ್ಯ ಲಾಲ್ ಮೋಹನ ಸಿಂಗ್ ಅವರು,‘ಕಾನೂನು ವೆಚ್ಚಕ್ಕಾಗಿ ನಿಧಿ ಸಂಗ್ರಹವನ್ನು ನಾವು ಮುಂದುವರಿಸುತ್ತೇವೆ ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೊಯ್ಯುತ್ತೇವೆ’ ಎಂದು ಹೇಳಿದರು.

ಪ್ರಸಕ್ತ ಸಿಐಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News