ಉತ್ತರಪ್ರದೇಶ ಹಿಂಸಾಚಾರ: ಕೇಂದ್ರ ಸಚಿವನ ಪುತ್ರ, ಮತ್ತಿತರರ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2021-10-04 06:20 GMT
Photo: Twitter/Samriddhi0809

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಚಲಾಯಿಸಿದ ಆರೋಪದ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ನಲ್ಲಿ ಇತರ ಹಲವಾರು ಜನರನ್ನು ಹೆಸರಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ರೈತರು ಸೇರಿದ್ದಾರೆ.

ಮಿಶ್ರಾರವರು ಇತ್ತೀಚೆಗೆ ಮಾಡಿದ್ದ ಭಾಷಣದಿಂದ ರೈತರು ಅಸಮಾಧಾನಗೊಂಡಿದ್ದು, ಅವರು ಪ್ರದೇಶಕ್ಕೆ ಭೇಟಿ ನೀಡುವುದನ್ನು ತಡೆಯಲು ರೈತರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದರು. "ಇದು ಕೇವಲ ಹತ್ತು ಹದಿನೈದು ರೈತರ ಪ್ರತಿಭಟನೆ ಮಾತ್ರ. ಅವರನ್ನು ಸರಿದಾರಿಗೆ ತರಲು ೨ ನಿಮಿಷ ಸಾಕು" ಎಂದು ಮಾತನಾಡುವ ವೇಳೆ ಅಜಯ್‌ ಮಿಶ್ರಾ ಹೇಳಿಕೆ ನೀಡಿದ್ದರು ಎಂದು ndtv.com ವರದಿ ಮಾಡಿದೆ.

ಸಚಿವರ ಆಗಮನವನ್ನು ತಡೆಯುವ ಸಲುವಾಗಿ ಹೆಲಿಪ್ಯಾಡ್‌ ಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು. ಮುತ್ತಿಗೆ ಕೊನೆಗೊಂಡ ಬಳಿಕ ಎಲ್ಲರೂ ಹಿಂದಿರುಗುತ್ತಿದ್ದ ವೇಳೆ ಒಟ್ಟು ಮೂರು ಕಾರುಗಳು ಹಠಾತ್ತನೆ ಬಂದೆರಗಿದ್ದು, ರೈತರ ಮೇಲೆ ಹಾದು ಹೋಗಿದೆ. ಒಬ್ಬ ರೈತ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಗಂಭೀರಾವಸ್ಥೆಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೈತ ಸಂಘದ ನಾಯಕ ಡಾ. ದರ್ಶನ್‌ ಪಾಲ್‌ ಹೇಳಿಕೆ ನೀಡಿದ್ದಾರೆ. ಕಾರಿನಲ್ಲಿ ಸಚಿವರ ಪುತ್ರನೂ ಹಾಜರಿದ್ದ ಎಂದು ಅವರು ಆರೋಪಿಸಿದ್ದಾರೆ.

ಆದರೆ ತನ್ನ ಪುತ್ರ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದಿರುವ ಅಜಯ್‌ ಮಿಶ್ರಾ ಆರೋಪಗಳನ್ನು ನಿರಾಕರಿಸಿದ್ದಾರೆ. ಸದ್ಯ ಅವರ ಪುತ್ರ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News