ದಿವಾಳಿತನ ಘೋಷಿಸಿದ್ದ ಅನಿಲ್‌ ಅಂಬಾನಿ ಹೆಸರಿನಲ್ಲಿ 18 ಸಾಗರೋತ್ತರ ಕಂಪೆನಿಗಳು: ಪ್ಯಾಂಡೋರಾ ಪೇಪರ್ಸ್‌ ಬಹಿರಂಗ

Update: 2021-10-04 09:13 GMT

ಹೊಸದಿಲ್ಲಿ: ಮೂರು ಚೀನೀ ಸರಕಾರ ನಿಯಂತ್ರಿತ ಬ್ಯಾಂಕ್‍ಗಳೊಂದಿಗಿನ ವಿವಾದದ ನಂತರದ ಬೆಳವಣಿಗೆಯಲ್ಲಿ ಲಂಡನ್‍ನ ನ್ಯಾಯಾಲಯದಲ್ಲಿ ಫೆಬ್ರವರಿ 2020ರಲ್ಲಿ ದಿವಾಳಿತನ ಘೋಷಿಸಿದ್ದ ಹಾಗೂ ತಮ್ಮ ಒಟ್ಟು ಸಂಪತ್ತು ಸೊನ್ನೆ ಎಂದು ಹೇಳಿದ್ದ ಉದ್ಯಮಿ ಅನಿಲ್ ಅಂಬಾನಿಗೆ ನಂತರ ಆ ಬ್ಯಾಂಕ್‍ಗಳಿಗೆ 716 ಮಿಲಿಯನ್ ಡಾಲರ್ ಪಾವತಿಸುವಂತೆ ನ್ಯಾಯಾಲಯ ಹೇಳಿದ್ದರೂ ತನ್ನ ಬಳಿ ಅಷ್ಟೊಂದು ಹಣ ಪಾವತಿಸುವಷ್ಟ್ಟು ಸ್ವತ್ತುಗಳಿಲ್ಲ ಎಂದು ಅವರು ಹೇಳಿದ್ದರು.

ಇದೀಗ ಇಂಡಿಯನ್ ಎಕ್ಸ್ ಪ್ರೆಸ್ ತನಿಖೆ ನಡೆಸಿದ ಪ್ಯಾಂಡೋರಾ ಪೇಪರ್ಸ್‍ನಲ್ಲಿರುವ ಗೌಪ್ಯ ದಾಖಲೆಗಳ ಕುರಿತು ಮಾಹಿತಿಯಂತೆ ರಿಲಯನ್ಸ್ ಎಡಿಎ ಗ್ರೂಪ್ ಅಧ್ಯಕ್ಷರಾಗಿರುವ ಅನಿಲ್ ಅಂಬಾನಿ ಮತ್ತವರ ಪ್ರತಿನಿಧಿಗಳು ಜೆರ್ಸಿ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಸೈಪ್ರಸ್‍ನಲ್ಲಿ ಕನಿಷ್ಠ 18 ಸಾಗರೋತ್ತರ ಕಂಪೆನಿಗಳನ್ನು ಹೊಂದಿದ್ದಾರೆ. 2007 ಹಾಗೂ 2010ರ ನಡುವೆ ಸ್ಥಾಪನೆಯಾಗಿರುವ ಈ 18 ಕಂಪೆನಿಗಳ ಪೈಕಿ ಏಳು ಕಂಪೆನಿಗಳು ಕನಿಷ್ಠ 1.3 ಬಿಲಿಯನ್ ಡಾಲರ್ ಸಾಲ ಪಡೆದಿವೆ ಹಾಗೂ ಹೂಡಿಕೆ ಮಾಡಿವೆ. ಡಿಸೆಂಬರ್ 2007 ಹಾಗೂ ಜನವರಿ 2008ರ ನಡುವೆ ಅನಿಲ್ ಅಂಬಾನಿ ಅವರು ಜೆರ್ಸಿಯಲ್ಲಿ ಬಟಿಸ್ಟ್ ಅನ್‍ಲಿಮಿಟೆಡ್, ರೇಡಿಯಂ ಅನ್‍ಲಿಮಿಟೆಡ್ ಹಾಗೂ ಹುಯಿ ಇನ್ವೆಸ್ಟ್‍ಮೆಂಟ್ ಅನ್‍ಲಿಮಿಟೆಡ್ ಸಂಸ್ಥೆಗಳ ಒಡೆತನ ಹೊಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಬಟಿಸ್ಟ್ ಮತ್ತು ರೇಡಿಯಂ ಕಂಪೆನಿಗಳು ಎಡಿಎ ಗ್ರೂಪ್‍ನ ಹೋಲ್ಡಿಂಗ್ ಕಂಪೆನಿಯಗಿರುವ ರಿಲಯನ್ಸ್ ಇನ್ನೋವೆಂಚರ್ಸ್ ಮಾಲೀಕತ್ವದಲ್ಲಿದ್ದರೆ. ಹುಯಿ ಇನ್ವೆಸ್ಟ್‍ಮೆಂಟ್ ಸಂಸ್ಥೆಯು ರಿಲಯನ್ಸ್ ಕ್ಯಾಪಿಟಲ್‍ನ ಪ್ರವರ್ತಕ ಸಂಸ್ಥೆ ಎಎಎ ಎಂಟರ್‍ಪ್ರೈಸಸ್ ಒಡೆತನದಲ್ಲಿದೆ.

ಜೆರ್ಸಿಯಲ್ಲಿ ಜನವರಿ 2008ರಲ್ಲಿ ಸ್ಥಾಪನೆಗೊಂಡ ಇನ್ನೆರಡು ಕಂಪೆನಿಗಳಾದ ಸಮ್ಮರ್‍ಹಿಲ್ ಲಿ ಹಾಗೂ ಡುಲ್ವಿಚ್ ಲಿ. ಅನಿಲ್ ಅಂಬಾನಿ ಅವರ ಪ್ರತಿನಿಧಿ ಅನೂಪ್ ದಲಾಲ್ ಅವರ ಮಾಲೀಕತ್ವದಲ್ಲಿದೆ.

ಅನಿಲ್ ಅಂಬಾನಿಗೆ ನಂಟು ಹೊಂದಿರುವ ಇನ್ನೂ ಮೂರು ಕಂಪೆನಿಗಳಾದ ಲಾರೆನ್ಸ್ ಮ್ಯುಚುವಲ್, ರಿಚರ್ಡ್ ಇಕ್ವಿಟಿ ಲಿ. ಮತ್ತು ಜರ್ಮನ್ ಇಕ್ವಿಟಿ ಲಿ. ಜಿನೀವಾದ ವಕೀಲರೊಬ್ಬರ ಹೆಸರಿನಲ್ಲಿದೆ.

ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‍ನಲ್ಲಿ ಅನಿಲ್ ಅಂಬಾನಿ ಒಡೆತನದ ನಾರ್ದರ್ನ್ ಅಟ್ಲಾಂಟಿಕ್ ಕನ್ಸಲ್ಟನ್ಸಿ ಸರ್ವಿಸಸ್ ಗ್ರೂಪ್ ಅನ್‍ಲಿಮಿಟೆಡ್ ಮತ್ತು ಅದರ ಎರಡು ಅಂಗಸಂಸ್ಥೆಗಳಾದ ನಾರ್ದರ್ನ್ ಅಟ್ಲಾಂಟಿಕ್ ಟ್ರೇಡಿಂಗ್ ಅನ್‍ಲಿಮಿಟೆಡ್ ಹಾಗೂ ನಾರ್ದರ್ನ್ ಅಟ್ಲಾಂಟಿಕ್ ಇನ್ವೆಸ್ಟ್‍ಮೆಟ್ಸ್ ಅನ್‍ಲಿಮಿಟೆಡ್ ಇವೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News