ಪ್ರವಾದಿ ವ್ಯಂಗ್ಯಚಿತ್ರ ರಚಿಸಿ ಆಕ್ರೋಶಕ್ಕೀಡಾಗಿದ್ದ ಕಾರ್ಟೂನಿಸ್ಟ್‌ ಅಪಘಾತದಲ್ಲಿ ಮೃತ್ಯು

Update: 2021-10-04 13:02 GMT
Photo: Twitter

ಸ್ಟಾಕ್‌ಹೋಮ್:‌ ಮುಸ್ಲಿಮರ ಪ್ರವಾದಿ ಮುಹಮ್ಮದ್‌ ರ ವ್ಯಂಗ್ಯಚಿತ್ರ ರಚಿಸಿದ ಕಾರಣದಿಂದ ವಿಶ್ವದಾದ್ಯಂತ ತೀವ್ರ ಆಕ್ರೋಶಕ್ಕೆ ಈಡಾಗಿದ್ದ ಸ್ವೀಡನ್‌ ನ ವ್ಯಂಗ್ಯಚಿತ್ರಕಾರ ಲಾರ್ಸ್‌ ವಿಲ್ಕ್ಸ್‌ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ಪೊಲೀಸ್‌ ಬಾಡಿಗಾರ್ಡ್‌ ಗಳೊಂದಿಗಿರುವಾಗಲೇ ಟ್ರಕ್‌ ಢಿಕ್ಕಿ ಹೊಡೆದ ಕಾರಣ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಾಹ್ಯ ಶಕ್ತಿಗಳ ಕೈವಾಡ ಇಲ್ಲ ಎಂದು ನಾವು ದೃಢೀಕರಿಸುತ್ತೇವೆ" ಎಂದು ದಕ್ಷಿಣ ಸ್ವೀಡನ್‌ ನ ಸ್ಥಳೀಯ ತನಿಖಾ ತಂಡವು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದೆ. 

ಪ್ರಕರಣದಲ್ಲಿ ಯಾವುದೇ ಬಾಹ್ಯಶಕ್ತಿಗಳ ಕೈವಾಡವಿಲ್ಲ. ಆದರೆ, ವಿಲ್ಕ್ಸ್‌ ಹಾಗೂ ಬಾಡಿಗಾರ್ಡ್‌ ಗಳಿದ್ದ ವಾಹನವು ತಾವು ಚಲಿಸುತ್ತಿದ್ದ ರಸ್ತೆಯಿಂದ ಹಿಂದೆ ಸರಿದು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ಟ್ರಕ್‌ ಗೆ ಢಿಕ್ಕಿ ಹೊಡೆದ ಕಾರಣವನ್ನು ನಾವಿನ್ನೂ ಪತ್ತೆಹಚ್ಚಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಎರಡೂ ವಾಹನಗಳು ಬೆಂಕಿಗಾಹುತಿಯಾಗಿದ್ದು, ಎಲ್ಲಾ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿಯ ಚಾಲಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ೨೦೦೮ರಲ್ಲಿ ಪ್ರವಾದಿ ಮುಹಮ್ಮದ್‌ ರನ್ನು ವಿಕೃತ ರೂಪದಲ್ಲಿ ಚಿತ್ರಿಸಿದ್ದ ಬಳಿಕ ವ್ಯಂಗ್ಯಚಿತ್ರಕಾರನಿಗೆ ಬೆದರಿಕೆಗಳು ಬರಲಾರಂಭಿಸಿದ್ದವು. ಬಳಿಕ ಆತ ಸಂಪೂರ್ಣ ಭದ್ರತೆಯೊಂದಿಗೆ ಜೀವಿಸುತ್ತಿದ್ದ ಎಂದು ವರದಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News