ಸೆಪ್ಟೆಂಬರ್‌ ನಲ್ಲಿ ದೇಶದ ಉದ್ಯೋಗಗಳ ಸಂಖ್ಯೆ 85 ಲಕ್ಷಕ್ಕೇರಿಕೆ: ಕೊಂಚ ಇಳಿಕೆ ಕಂಡ ನಿರುದ್ಯೋಗ ದರ

Update: 2021-10-04 14:39 GMT

ಹೊಸದಿಲ್ಲಿ,ಅ.4: ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ದೇಶದಲ್ಲಿ ಉದ್ಯೋಗಗಳ ಸಂಖ್ಯೆಯಲ್ಲಿ 85 ಲಕ್ಷದಷ್ಟು ಏರಿಕೆಯಾಗಿದ್ದು,2020 ಮಾರ್ಚ್ ನಿಂದೀಚಿಗೆ ಗರಿಷ್ಠ ಮಟ್ಟವಾಗಿರುವ 40.62 ಕೋ.ಗೆ ತಲುಪಿದೆ. ಹೊಸ ಉದ್ಯೋಗಿಗಳಲ್ಲಿ ವೇತನದಾರ ವರ್ಗದವರು ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ ಇದು 2019,ಸೆಪ್ಟೆಂಬರ್ನಲ್ಲಿದ್ದ 40.67 ಕೋ.ಉದ್ಯೋಗಗಳಿಗಿಂತ ಕೊಂಚ ಕಡಿಮೆಯೇ ಇದೆ ಎಂದು ವರದಿಗಳು ತಿಳಿಸಿವೆ.

ಇದೇ ವೇಳೆ ಈ ವರ್ಷದ ಆಗಸ್ಟ್ ನಲ್ಲಿ ಶೇ.8.3ರಷ್ಟಿದ್ದ ನಿರುದ್ಯೋಗ ದರವು ಸೆಪ್ಟಂಬರ್ ನಲ್ಲಿ ಶೇ.6.86ಕ್ಕೆ ಇಳಿಕೆಯಾಗಿದೆ, ಆದರೆ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ದಾಖಲಾಗಿದ್ದ ಶೇ.6.68ಕ್ಕಿಂತ ಕೊಂಚ ಹೆಚ್ಚೇ ಇದೆ ಎಂದು ಸಿಎಂಐಇ ಸಮೀಕ್ಷೆಯು ತೋರಿಸಿದೆ.
1.79 ಲಕ್ಷಕ್ಕೂ ಅಧಿಕ ಕುಟುಂಬಗಳು ಮತ್ತು 15 ವರ್ಷಕ್ಕೂ ಹೆಚ್ಚಿನ ಪ್ರಾಯದ 5.22 ಲ.ಜನರನ್ನು ಸಮೀಕ್ಷೆಯು ಗುರಿಯಾಗಿಸಿಕೊಂಡಿತ್ತು.

ಆಗಸ್ಟ್ ನಲ್ಲಿ ಶೇ.40.5ರಷ್ಟಿದ್ದ ಕಾರ್ಮಿಕ ವರ್ಗ ಪಾಲ್ಗೊಳ್ಳುವಿಕೆಯು ಸೆಪ್ಟಂಬರ್ ನಲ್ಲಿ ಶೇ.40.7ಕ್ಕೇರಿದೆ ಮತ್ತು ಮುಖ್ಯವಾಗಿ ಉದ್ಯೋಗ ದರವು ಸೆಪ್ಟಂಬರ್ ನಲ್ಲಿ ಶೇ.37.2ರಿಂದ ಶೇ.37.9ಕ್ಕೇರಿದೆ.

2021 ಆಗಸ್ಟ್ ನಲ್ಲಿ 7.71 ಕೋ.ಇದ್ದ ವೇತನದಾರ ವರ್ಗದಲ್ಲಿಯ ಉದ್ಯೋಗಗಳ ಸಂಖ್ಯೆಯು ಸೆಪ್ಟಂಬರ್ ನಲ್ಲಿ 8.41 ಕೋ.ಗೆ ಏರಿಕೆಯಾಗಿದೆ. ಎಲ್ಲ ಉದ್ಯೋಗಗಳ ಪೈಕಿ ಈ ವರ್ಗದ ಉದ್ಯೋಗಗಳಲ್ಲಿ ಅತ್ಯಂತ ಹೆಚ್ಚಿನ ಏರಿಕೆಯಾಗಿದೆ. ಇದರಿಂದ ವೇತನದಾರ ವರ್ಗದಲ್ಲಿ ಉದ್ಯೋಗಗಳ ಸಂಖ್ಯೆ 2019-20ರಲ್ಲಿದ್ದ ಸರಸರಿ 8.67 ಕೋ.ಗೆ ಸಮೀಪಿಸಿದೆ ಎಂದು ಸಿಎಂಐಇ ಎಂಡಿ ಮತ್ತು ಸಿಇಒ ಮಹೇಶ ವ್ಯಾಸ್ ಅವರು ವರದಿಯಲ್ಲಿ ಹೇಳಿದ್ದಾರೆ.

ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಉದ್ಯೋಗಗಳು ಆಗಸ್ಟ್ನಲ್ಲಿ 12.84 ಕೋ.ಇದ್ದುದು ಸೆಪ್ಟಂಬರ್ನಲ್ಲಿ 13.4 ಕೋ.ಗೆ ಏರಿಕೆಯಾಗಿದೆ. ಇದರೊಂದಿಗೆ ಈ ವರ್ಗದವರ ಉದ್ಯೋಗ ಪ್ರಮಾಣವು 2019-20ರಲ್ಲಿ ಕೋವಿಡ್ ಸಾಂಕ್ರಾಮಿಕದ ಮೊದಲಿದ್ದ 13.05ಕೋ.ಯನ್ನು ದಾಟಿದೆ ಎಂದು ಸಮೀಕ್ಷೆಯು ತೋರಿಸಿದೆ.

ಆದರೆ ಸೆಪ್ಟಂಬರ್ ನಲ್ಲಿ ಉದ್ಯಮಿಗಳ ಸಂಖ್ಯೆ ಕುಸಿದಿದೆ. ಆಗಸ್ಟ್ ನಲ್ಲಿ 7.6 ಕೋ.ಇದ್ದ ಉದ್ಯಮಿಗಳ ಸಂಖ್ಯೆ ಸೆಪ್ಟಂಬರ್ ನಲ್ಲಿ 7.44 ಕೋ.ಗೆ ಇಳಿದಿದೆ. ರೈತರ ವಿಷಯದಲ್ಲಿಯೂ ಇದೇ ಪ್ರವೃತ್ತಿ ಮರುಕಳಿಸಿದೆ. ಆಗಸ್ಟ್ ನಲ್ಲಿ 11.6 ಕೋ.ಇದ್ದ ರೈತರ ಸಂಖ್ಯೆ ಸೆಪ್ಟಂಬರ್ನಲ್ಲಿ 11.36 ಕೋ.ಗೆ ಕುಸಿದಿದೆ.
 
ಈ ಕುಸಿತವು ಎರಡು ಅಂಶಗಳನ್ನು ಸೂಚಿಸುತ್ತದೆ. ಮೊದಲನೆಯದು ಈ ಹಿಂದೆ ನಷ್ಟಗೊಂಡಿದ್ದ ಕೆಲವು ವೇತನದಾರ ಉದ್ಯೋಗಗಳು ಮರುಸೃಷ್ಟಿಯಾಗಿ ಕೃಷಿ ಕ್ಷೇತ್ರಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಮೊದಲಿನ ಉದ್ಯೋಗಗಳಿಗೆ ಮರಳಿದ್ದಾರೆ. ಎರಡನೆಯದಾಗಿ ದಿನಗೂಲಿ ಕಾರ್ಮಿಕರ ರೂಪದಲ್ಲಿ ಹೆಚ್ಚುವರಿ ಜನರಿಗೆ ಕೆಲಸ ನೀಡುವಷ್ಟು ಆರ್ಥಿಕ ಚಟುವಟಿಕೆಗಳು ಪುನಃಶ್ಚೇತನ ಪಡೆದುಕೊಂಡಿವೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News