ನೆಲ್ಲಿ ನರಮೇಧದ ಕುರಿತು ಪ್ರಚೋದನಾತ್ಮಕ ಹೇಳಿಕೆ ಆರೋಪ: ಕಾಂಗ್ರೆಸ್ ಶಾಸಕ ಶರ್ಮನ್‌ ಅಲಿ ಅಹ್ಮದ್ ಪಕ್ಷದಿಂದ

Update: 2021-10-04 16:02 GMT
photo: twitter.com/BatoriWorld

ಗುವಾಹಟಿ,ಅ.4: 1983ರ ನೆಲ್ಲೀ ನರಮೇಧದ ಕುರಿತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಎರಡು ದಿನಗಳ ಹಿಂದೆ ಬಂಧಿಸಲ್ಪಟ್ಟಿರುವ ತನ್ನ ಶಾಸಕ ಶರ್ಮನ್ ಅಲಿ ಅಹ್ಮದ್ ಅವರನ್ನು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಸೋಮವಾರ ಪಕ್ಷದಿಂದ ಅಮಾನತುಗೊಳಿಸಿದೆ. 1983ರಲ್ಲಿ ಅಸ್ಸಾಮಿನ ಮೋರಿಗಾಂವ್ ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೂರ್ವ ಬಂಗಾಳ ಮೂಲದ ಸಾವಿರಾರು ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು.

  
ನೆಲ್ಲೀ ನರಮೇಧದ ಹುತಾತ್ಮರು ಎಂದು ಹಲವರು ನಂಬಿರುವ ಎಂಟು ಜನರನ್ನು ʼಹಂತಕರುʼ ಎಂದು ಅಹ್ಮದ್ ಕರೆದಿದ್ದರು. ಸೆ.23ರಂದು ಅಸ್ಸಾಮಿನ ದರಾಂಗ್ ಜಿಲ್ಲೆಯಲ್ಲಿ ನಡೆದಿದ್ದ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರ್ನಿಂದ ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೊಲ್ಲಲ್ಪಟ್ಟ ನಂತರ ವೀಡಿಯೊವೊಂದರಲ್ಲಿ ಅಹ್ಮದ್ ಈ ಹೇಳಿಕೆಯನ್ನು ನೀಡಿದ್ದರು. ಅಹ್ಮದ್ ಅವರನ್ನು ಅಸ್ಸಾಂ ಪೊಲೀಸರು ಶನಿವಾರ ಬಂಧಿಸಿದ್ದರು.
 
ಪಕ್ಷದ ಘನತೆಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಇಂತಹ ಹೇಳಿಕೆಗಾಗಿ ಕಾಂಗ್ರೆಸ್ ಪಕ್ಷವು ಅಹ್ಮದ್ಗೆ ಶೋಕಾಸ್ ನೋಟಿಸನ್ನು ಜಾರಿಗೊಳಿಸಿತ್ತು. ಪದೇಪದೇ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್ ಸೋಮವಾರ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ನೆಲ್ಲೀ ನರಮೇಧ ಮತ್ತು ಅಹ್ಮದ್ ಹೇಳಿಕೆ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಅಸ್ಸಾಮಿನಿಂದ ಗಡಿಪಾರು ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು 1979ರಲ್ಲಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಅಸ್ಸಾಂ ಆಂದೋಲನವನ್ನು ಪ್ರಾರಂಭಿಸಿದ್ದು, 1983ರಲ್ಲಿ ನೆಲ್ಲೀ ನರಮೇಧ ನಡೆದಿತ್ತು. ಆಂದೋಲನವು ಹಲವಾರು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದ್ದು,ನೆಲ್ಲೀ ಗ್ರಾಮದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಕೇವಲ ಆರು ಗಂಟೆಗಳಲ್ಲಿ ಪ್ರತಿಭಟನಾಕಾರರು ಸುಮಾರು 1,800 ಜನರನ್ನು ಹತ್ಯೆಗೈದಿದ್ದು,ಈ ಪೈಕಿ ಹೆಚ್ಚಿನವರು ಮುಸ್ಲಿಮರಾಗಿದ್ದರು. 3,000 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಅನಧಿಕೃತ ವರದಿಗಳು ತಿಳಿಸಿದ್ದವು. ಅಹ್ಮದ್ ತನ್ನ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದ ಎಂಟು ಜನರು ದರಾಂಗ್ ಜಿಲ್ಲೆಯ ಸಿಪಝಾರ್ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು.

ಹುತಾತ್ಮರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಈ ಎಂಟು ಜನರು ಬಂಗಾಳಿ ಭಾಷಿಕ ಮುಸ್ಲಿಂ ಸಮುದಾಯದ ಹಲವಾರು ಜನರ ಸಾವಿಗೆ ಕಾರಣರಾಗಿದ್ದರು ಎಂದು ಅಹ್ಮದ್ ವೀಡಿಯೊದಲ್ಲಿ ಹೇಳಿದ್ದರು.

ಸೆ.23ರಂದು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಸಿಪಝಾರ್ನಲ್ಲಿಯೂ ಹಿಂಸಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಅಹ್ಮದ್ ಹೇಳಿಕೆಯು ಮಹತ್ವವನ್ನು ಪಡೆದುಕೊಂಡಿತ್ತು. ಅಹ್ಮದ್ ಹೇಳಿಕೆಯು ಕೋಮು ಪ್ರಚೋದಕವಾಗಿದೆ ಮತ್ತು ಅಸ್ಸಾಂ ಆಂದೋಲನದ ಹಳೆಯ ಘಟನೆಗಳ ಗಾಯಗಳನ್ನು ಕೆದಕುವಂಥದ್ದಾಗಿದೆ. ಅವರ ಹೇಳಿಕೆಯು ರಾಜ್ಯದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಬಹುದು ಎಂದು ಕಾಂಗ್ರೆಸ್ ತನ್ನ ಶೋಕಾಸ್ ನೋಟಿಸಿನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News