ಲಖೀಂಪುರ ಹಿಂಸಾಚಾರ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ

Update: 2021-10-04 17:41 GMT

ಲಕ್ನೋ,ಸೆ. 4: ಲಖೀಂಪುರ ಖೇರಿ ಜಿಲ್ಲೆಯಲ್ಲಿ ರವಿವಾರ ಭುಗಿಲೆದ್ದ ಹಿಂಸಾಚಾರದ ಘಟನೆಯ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದೆಂದು ಉತ್ತರಪ್ರದೇಶ ಸರಕಾರವು ರವಿವಾರ ಘೋಷಿಸಿದೆ.

ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರವಿವಾರ ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದರು. ಹಿಂಸಾಚಾರದಲ್ಲಿ ಮೃತಟ್ಟ ನಾಲ್ವರು ರೈತರ ಕುಟುಂಬಗಳಿಗೆ ತಲಾ 45 ಲಕ್ಷ ರೂ. ಪರಿಹಾರಧನ ಹಾಗೂ ಅವರ ಕುಟುಂಬಗಳಿಗೆ ತಲಾ ಒಂದು ಸರಕಾರಿ ಉದ್ಯೋಗವನ್ನು ನೀಡಲಾಗುವುದೆಂದು ಉತ್ತರಪ್ರದೇಶ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.

ಹಿಂಸಾತಾರದಲ್ಲಿ ಗಾಯಗೊಡವರಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರುಉತ್ತರಪ್ರದೇಶ ಸರಕಾರದ ಪರಿಹಾರ ಘೋಷಣೆಯ ಬಳಿಕ ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ ಹಾಗೂ ನಾಲ್ವರು ರೈತರ ಪಾಥೀರ್ವ ಶರೀರದ ಅಂತ್ಯಸಂಸ್ಕಾರ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಹಿಂಸಾಚಾರಕ್ಕೆ ಬಲಿಯಾದ ನಾಲ್ವರು ರೈತರ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದೆಂದು ಖೇರಿಯ ಮುಖ್ಯ ಪೊಲೀಸ್ ಅಧಿಕಾರಿ ಶೈಲೇಂದ್ರ ಭಟ್ನಾಗರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಮೃತಪರಟ್ಟ ಇತರ ನಾಲ್ವರು ವ್ಯಕ್ತಿಗಳ ಮೃತದೇಹಗಳನ್ನು ಕೂಡಾ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದವರು ತಿಳಿಸಿದ್ದಾರೆ.

ರೈತರ ಕಲ್ಲೆಸೆತದಿಂದಾಗಿ ಕಾರು ಅವಘಡ: ಅಜಯ್ ಮಿಶ್ರಾ

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಕೇಂದ್ರ ಸಚಿವ ಅಜಯ್ಮಿಶ್ರಾ ಅವರ ಪುತ್ರ ಅಶೀಶ್ ಮಿಶ್ರಾ ಕಾರು ಹರಿಸಿದ್ದು, ಇದರಿಂದಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆಂದು ರೈತ ನಾಯಕರು ಆರೋಪಿಸಿದ್ದಾರೆ. ಆದಾಗ್ಯೂ ವಾಹನದ ಮೇಲೆ ರೈತರು ಕಲ್ಲುಗಳನ್ನು ಎಸೆಯತೊಡಗಿದ್ದರಿಂದ ಅವಘಡ ಸಂಭವಿಸಿತೆಂದು ಅಶೀಶ್ ಮಿಶ್ರಾ ಹೇಳಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಇತರ ನಾಲ್ಕು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಕಾರು ಚಾಲಕನೆಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ರೈತರೊಂದಿಗೆ ಖಡ್ಗಗಳು ಹಾಗೂ ಲಾಠಿಗಳನ್ನು ಹಿಡಿದ್ದ ದುಷ್ಕರ್ಮಿಗಳು ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಈ ಮಧ್ಯೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿರುವ ಅವರ ಪುತ್ರನನ್ನು ಬಂಧಿಸಬೇಕೆಂದು ಕಾಂಗ್ರೆಸ್ ಪಕ್ಷವು ಸೋಮವಾರ ಆಗ್ರಹಿಸಿದೆ.

ಲಖೀಂಪುರ ಖೇರಿ: ಸೆಕ್ಷನ್ 144 ಜಾರಿ, ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ

ರವಿವಾರ 9 ಮಂದಿಯ ಸಾವಿಗೆ ಕಾರಣವಾದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜಿಲ್ಲೆಯ ಹಲವೆಡೆ ಮೊಬೈಲ್ಪೋನ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
 ಲಖೀಂಪುರ ಖೇರಿಯಲ್ಲಿ ಪ್ರತಿಟನನಿರತ ರೈತರ ಮೇಲೆ ಕಾರು ಹರಿಸಿದರೆನ್ನಲಾದ ಘಟನೆಗೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಹಾಗೂ ಇತರ ಹಲವಾರು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News