ಲಖೀಂಪುರ ಹಿಂಸಾಚಾರ ವಿರುದ್ಧ ಸಿಂಘುಗಡಿಯಲ್ಲಿ ರೈತರ ಬೃಹತ್ ಪ್ರತಿಭಟನೆ

Update: 2021-10-04 18:09 GMT
file photo

ಹೊಸದಿಲ್ಲಿ, ಸೆ. 21: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರವಿವಾರ ನಡೆದ ಹಿಂಸಾತ್ಮಕ ಘಟನೆಯಲ್ಲಿ ನಾಲ್ವರು ರೈತರು ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ನೂರಾರು ರೈತರು ದಿಲ್ಲಿಯ ಸಿಂಘು ಗಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

 ಕಪ್ಪು ಬಾವುಟಗಳನ್ನು ಹಿಡಿದ್ದ ರೈತರು ಸಿಂಘು ಗಡಿಯುದ್ದಕ್ಕೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು. ಲಖೀಂಪುರ ಖೇರಿಯಲ್ಲಿ ಏನು ನಡೆಯಿತೆಂಬುದರ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು, ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ಸಂಪುಟದಿಂದ ಅಮಾನತುಗೊಳಿಸಲು ಮತ್ತು ರೈತರ ಸಾವಿನ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು ಹಾಗೂ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆಂದು ರೈತ ನಾಯಕ ಅಭಿಮನ್ಯು ಕೋಹರ್ ಹೇಳಿದ್ದಾರೆ.

ಉತ್ತರಪ್ರದೇಶ,ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಸೇರಿದಂತೆ ದೇಶದ ದೇಶದ ವಿವಿಧೆಡೆ, ಜಿಲ್ಲಾಕೇಂದ್ರಗಳಲ್ಲಿಯು ಲಖೀಂಪುರದಲ್ಲಿ ರೈತರ ಸಾವಿನ ಘಟನೆಯ ವಿರುದ್ಧ ಪ್ರತಿಭಟನೆಗಳು ನಡೆದಿರುವುದಾಗಿ ವರದಿಯಾಗಿವೆ. ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕಳೆದ ವರ್ಷದ ನವೆಂಬರ್ 26ರಿಂದ ದಿಲ್ಲಿಯ ಗಡಿಗಳಲ್ಲಿ ರೈತರು ಬೀಡುಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News