ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ

Update: 2021-10-05 19:31 GMT

ಸ್ಟಾಕ್ಹೋಂ, ಸೆ. 25: 2021ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪುರಸ್ಕಾರಗಳನ್ನು ಮಂಗಳವಾರ ಘೋಷಿಸಲಾಗಿದ್ದು, ವಿಜ್ಞಾನಿಗಳಾದ ಸಿಯುಕುರೊ ಮನಾಬೆ, ಕ್ಲಾವುಸ್ ಹ್ಯಾಸೆಲ್ಮ್ಯಾನ್ ಹಾಗೂ ಗಿಯೊರ್ಗಿಯೊ ಪಾರ್ಸಿ ಅವರು ಹಂಚಿಕೊಂಡಿದ್ದಾರೆ. ಸಂಕೀರ್ಣವಾದ ಭೌತ ವ್ಯವಸ್ಥೆಗಳ ಕುರಿತ ನಮ್ಮ ತಿಳುವಳಿಕೆಗೆ ಈ ಮೂವರು ನೀಡಿದ ಅಭೂತಪೂರ್ವ ಕೊಡುಗೆಗಾಗಿ ಅವರಿಗೆ ಪುರಸ್ಕಾರ ಸಂದಿದೆ.

ಭೌತ ನೊಬೆಲ್ ಪುರಸ್ಕೃತರಾದ ಸಿಯುಕುರೊ ಮನಾಬೆ ಜಪಾನ್ ಮೂಲದ ಅಮೆರಿಕನ್ ಪ್ರಜೆ. ಕ್ಲಾವುಸ್ ಹ್ಯಾಸೆಲ್ ಮಾನ್ನ್ ಅವರು ಜರ್ಮನಿ ಹಾಗೂ ಗಿಯೊರ್ಗಿಯೊ ಪಾರಿಸಿ ಇಟಲಿಯವರಾಗಿದ್ದಾರೆ.

ಮನಾಬೆ ಅವರ ಸಂಶೋಧನೆಯು ಹಾಲಿ ಹವಾಮಾನ ಮಾದರಿಗಳ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟಿದೆಯೆಂದು ನೊಬೆಲ್ ಪುರಸ್ಕಾರ ಸಮಿತಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ವಾತಾವರಣದಲ್ಲಿ ಇಂಗಾಲದ ಡಯಾಕ್ಸೈಡ್ ನ ಮಟ್ಟದಲ್ಲಿ ಉಂಟಾಗಿರುವ ಹೆಚ್ಚಳವು ಭೂಮಿಯ ಮೇಲ್ಮೈಯ ತಾಪಮಾನವನ್ನು ಹೇಗೆ ಹೆಚ್ಚಿಸಿದೆಯೆಂಬುದನ್ನು ಮನಾಬೆ ತೋರಿಸಿಕೊಟ್ಟಿದ್ದಾರೆಂದು ಅದು ತಿಳಿಸಿದೆ.

ಇನ್ನೋರ್ವ ನೊಬೆಲ್ ಪುರಸ್ಕೃತ ಹ್ಯಾಸೆಲ್ ಮ್ಯಾನ್ನ್ ಅವರಿಗೆ ಹವಾಮಾನ ಹಾಗೂ ವಾಯುಗುಣದ ನಡುವೆ ಪರಸ್ಪರ ನಂಟಿರುವುದನ್ನು ನಿರೂಪಿಸುವ ಮಾದರಿಯನ್ನು ರೂಪಿಸಿದ್ದಕ್ಕಾಗಿ ಪ್ರಶಸ್ತಿ ದೊರೆತಿದೆ. ವಾತಾವರಣದಲ್ಲಿ ತಾಪಮಾನದ ಹೆಚ್ಚಳಕ್ಕೆ, ಮಾನ ಚಟುವಟಿಕೆಗಳಿಂದ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತಿರುವುದೇ ಕಾರಣವೆಂಬುದನ್ನು ಸಾಬೀತುಪಡಿಸಲು ಅವರ ವಿಧಾನಗಳನ್ನು ಬಳಸಿಕೊಳ್ಳಲಾಗಿದೆ’’ ಎಂದು ಸಮಿತಿ ತಿಳಿಸಿದೆ.

ಇನ್ನೋರ್ವ ವಿಜ್ಞಾನಿ ಪಾರಿಸಿ ಅವರಿಗೆ ಅವ್ಯವಸ್ಥಿತವಾದ ಸಂಕೀರ್ಣ ವಸ್ತುಗಳಲ್ಲಿರುವ ಗುಪ್ತವಾದ ನಮೂನೆಗಳನ್ನು ಪತ್ತೆಹಚ್ಚಿದ್ದಕ್ಕಾಗಿ ನೊಬೆಲ್ ಪುರಸ್ಕಾರ ದೊರೆತಿದೆ. ಸಂಕೀರ್ಣ ವ್ಯವಸ್ಥೆಗಳ ಸಿದ್ದಾಂತದಲ್ಲಿ ಅವರ ಸಂಶೋಧನೆಗಳು ಅತ್ಯಂತ ಮಹತ್ವಪೂರ್ಣವಾದ ಕೊಡುಗೆಯನ್ನು ನೀಡಿವೆ’’ ಎಂದು ನೊಎಲ್ ಪುರಸ್ಕಾರ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಶಸ್ತಿ ಮೊತ್ತವು 10 ದಶಲಕ್ಷ ಸ್ವೀಡಿಶ್ ಕ್ರೋನ್ ಆಗಿದ್ದು (1.15 ದಶಲಕ್ಷ ಡಾಲರ್) ಅದರಲ್ಲಿ ಅರ್ಧಪಾಲನ್ನು ಮನಾಬೆ ಹಾಗೂ ಹ್ಯಾಸೆಲ್ ಮ್ಯಾನ್ ಅವರಿಗೆ ಸಮಾನವಾಗಿ ಹಂಚಲಾಗುವುದು. ಉಳಿದ ಅರ್ಧಪಾಲು ಪ್ರಶಸ್ತಿಯ ಹಣವನ್ನು ಪ್ಯಾರಿಸಿ ಅವರಿಗೆ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News