ಲಖಿಂಪುರ ಖೇರಿ ಪ್ರಕರಣ: ಅಜಯ್ ಮಿಶ್ರ ರಾಜೀನಾಮೆಗೆ, ಪುತ್ರನ ಬಂಧನಕ್ಕೆ ಅಖಿಲೇಶ್ ಯಾದವ್ ಆಗ್ರಹ
ಲಕ್ನೋ, ಅ. 6: ಎಂಟು ಮಂದಿ ರೈತರು ಸಾವನ್ನಪ್ಪಲು ಕಾರಣವಾದ ಲಖೀಂಪುರ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರ ರಾಜೀನಾಮೆ ನೀಡಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
ಅಜಯ್ ಮಿಶ್ರಾ ಅವರು ತತ್ಕ್ಷಣ ರಾಜೀನಾಮೆ ನೀಡಬೇಕು. ಅಲ್ಲದೆ, ಉದ್ದೇಶಪೂರ್ವಕವಾಗಿ ರೈತರ ಮೇಲೆ ಕಾರು ಹರಿಸಿದ್ದ ಅವರ ಪುತ್ರ ಅಖಿಲೇಶ್ ಮಿಶ್ರಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲೇಶ್ ಯಾದವ್ ತಿಳಿದ್ದಾರೆ.
ಹಿಟ್ಲರ್ ನ ಆಡಳಿತದಲ್ಲಿ ಕೂಡ ರೈತರ ಮೇಲೆ ಉದ್ದೇಶ ಪೂರ್ವಕವಾಗಿ ಕಾರು ಹರಿಸಿದಂತಹ ಘಟನೆಗಳು ನಡೆದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಲಖೀಂಪುರ ಖೇರಿ ಹಿಂಸಾಚಾರಕ್ಕೆ ಒಂದು ದಿನ ಮುನ್ನ ಕೇಂದ್ರದ ಸಹಾಯಕ ಸಚಿವರು ರೈತರಿಗೆ ಬೆದರಿಕೆ ಒಡ್ಡಿದ್ದರು. ಒಂದು ದಿನದ ಬಳಿಕ ಅವರ ಪುತ್ರ ಕಾರು ಹರಿಸಿ ರೈತರನ್ನು ಹತ್ಯೆಗೈದಿದ್ದಾರೆ. ಈ ಹತ್ಯೆ ಪ್ರಕರಣದ ಹಿಂದಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
‘‘ಕೇಂದ್ರ ಸಚಿವ (ಅಜಯ್ ಮಿಶ್ರಾ)ರು ಕೂಡಲೇ ರಾಜೀನಾಮೆ ನೀಡಬೇಕು. ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಗೆ ಸಚಿವರ ಪುತ್ರ ಹೊಣೆ ಎಂಬುದನ್ನು ವೀಡಿಯೊ ಸಾಕ್ಷ ತಿಳಿಸಿದೆ’’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಆರೋಪವನ್ನು ಅಜಯ್ ಮಿಶ್ರಾ ಹಾಗೂ ಅವರ ಪುತ್ರ ಅಶೀಶ್ ಮಿಶ್ರಾ ನಿರಾಕರಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಅವರು ರೈತರ ಮೇಲೆ ಕಾರು ಹರಿಸಿರುವುದಕ್ಕೆ ವೀಡಿಯೊ ಸಾಕ್ಷಗಳು ಇವೆ ಎಂದರು.