ಜೈಲಿನಲ್ಲಿರುವ ಸಿದ್ದೀಕ್‌ ಕಪ್ಪನ್‌ ಗೆ ಚಿಕಿತ್ಸೆ ನಿರಾಕರಣೆ: ಸುಪ್ರೀಂಕೋರ್ಟ್‌ ನಲ್ಲಿ ನ್ಯಾಯಾಂಗನಿಂದನೆ ಅರ್ಜಿ ದಾಖಲು

Update: 2021-10-08 05:53 GMT

ಲಕ್ನೋ: ಉತ್ತರಪ್ರದೇಶದ ಸರಕಾರಿ ಅಧಿಕಾರಿಗಳು ಜೈಲಿನಲ್ಲಿರುವ ಸಿದ್ದೀಕ್‌ ಕಪ್ಪನ್‌ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೂ ಮೇ ೬ರಂದು ಬಲವಂತವಾಗಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದರು ಎಂದು ಆರೋಪಿಸಿ ಕೇರಳದ ಪತ್ರಕರ್ತರ ಒಕ್ಕೂಟವು  ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಈ ಕ್ರಮವು ನ್ಯಾಯಾಲಯವು ನೀಡಿದ ಆದೇಶದ ಉಲ್ಲಂಘನೆಯಾಗಿದೆ ಎಂದು ಪತ್ರಕರ್ತರ ಸಂಘ ಹೇಳಿದೆ.

"ಆರೋಪಿ ಸಿದ್ದೀಕ್‌ ಕಪ್ಪನ್‌ ರಿಗೆ ಇನ್ನೂ ವೈದ್ಯಕೀಯ ನೆರವಿನ ಅವಶ್ಯಕತೆಯಿದೆ. ಅದನ್ನು ನಿರಾಕರಿಸಲಾಗಿದೆ. ಚಿಕಿತ್ಸೆಯಲ್ಲಿ ವಿಳಂಬ ಮಾಡುವುದರಿಂದ ಅವರ ಆರೋಗ್ಯಕ್ಕೆ ಇನ್ನೂ ಹಾನಿಯಾಗುತ್ತದೆ ಎಂದು ಕೇರಳ ಯೂನಿಯನ್‌ ಆಫ್‌ ವರ್ಕಿಂಗ್‌ ಜರ್ನಲಿಸ್ಟ್‌ ತನ್ನ ಮನವಿಯಲ್ಲಿ ಉಲ್ಲೇಖಿಸಿದೆ. ಕಪ್ಪನ್‌ ತೀವ್ರ ನೋವಿನಲ್ಲಿ ಬಳಲುತ್ತಿದ್ದಾರೆ ಎಂದೂ ಹೇಳಲಾಗಿದೆ.

ಉತ್ತರಪ್ರದೇಶದ ಹತ್ರಾಸ್‌ ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು. ಕಾನೂನು ಸುವ್ಯವಸ್ಥೆಗೆ ತೊಂದರೆ ಸೃಷ್ಟಿಸಲು ಮತ್ತು ಜಾತಿ ಗಲಭೆಗಳನ್ನು ಹುಟ್ಟುಹಾಕುವ ಸಂಚಿನ ಭಾಗವಾಗಿ ಕಪ್ಪನ್ ಹತ್ರಾಸ್‌ಗೆ ತೆರಳುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News