×
Ad

ತ್ರಿಪುರಾ: ಕಾಂಗ್ರೆಸ್ ನ ಮಾಜಿ ನಾಯಕನಿಂದ ನೂತನ ಪಕ್ಷ ಆರಂಭ

Update: 2021-10-08 20:21 IST
ಫೋಟೊ: twitter

ಅಗರ್ತಲಾ, ಅ. 8: ತ್ರಿಪುರಾ ಕಾಂಗ್ರೆಸ್ನ ಮಾಜಿ ವರಿಷ್ಠ ಪಿಜುಸ್ ಕಾಂತಿ ಬಿಸ್ವಾಸ್ ಗುರುವಾರ ಸ್ವಂತ ರಾಜಕೀಯ ಪಕ್ಷ ಆರಂಭಿಸಿದ್ದಾರೆ. ನೂತನ ಪಕ್ಷವಾದ ತ್ರಿಪುರಾ ಡೆಮಾಕ್ರೆಟಿಕ್ ಫ್ರಂಟ್ನ ಅಧ್ಯಕ್ಷರನ್ನಾಗಿ ತನ್ನ ಪುತ್ರ ಹಾಗೂ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಪೂಜನ್ ಬಿಸ್ವಾಸ್ ಅವರನ್ನು ಪಿಜುಸ್ ಕಾಂತಿ ಬಿಸ್ವಾಸ್ ನೇಮಕ ಮಾಡಿದ್ದಾರೆ. ಭಾರತ ಸಂವಿಧಾನದ ಸಂಪೂರ್ಣ ವಿಶ್ವಾಸದೊಂದಿಗೆ ಮಹಾತ್ಮಾ ಗಾಂಧಿ ತತ್ವದ ಆಧಾರದಲ್ಲಿ ಈ ಪಕ್ಷ ಆರಂಭಿಸಲಾಗಿದೆ. 

ಬುಡಕಟ್ಟು ಸಮುದಾಯದ ಹಾಗೂ ಬುಡಕಟ್ಟೇತರ ಸಮುದಾಯದ ಜನರ ಹಕ್ಕುಗಳ ಹಿತರಕ್ಷಣೆ ನಮ್ಮ ಪಕ್ಷದ ಗುರಿ ಎಂದು ಪಿಜುಸ್ ಕಾಂತಿ ಬಿಸ್ವಾಸ್ ಹೇಳಿದ್ದಾರೆ. ಕಾಂಗ್ರೆಸ್ ತಮ್ಮನ್ನು ನಿರ್ಲಕ್ಷಿಸುತ್ತಿದೆ ಹಾಗೂ ಗುಂಪುಗಾರಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಪಿಜುಸ್ ಕಾಂತಿ ಬಿಸ್ವಾಸ್ ಅವರು ಕಾಂಗ್ರೆಸ್ ಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. 

ಕಾಂಗ್ರೆಸ್ ಸಮಿತಿ ತ್ರಿಪುರಾದ ಕಾಂಗ್ರೆಸ್ ನಾಯಕರ ಮನವಿಯನ್ನು ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ. ನೂತನ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾಂಗ್ರೆಸ್ನ ಮಾಜಿ ಉಪಾಧ್ಯಕ್ಷ ತಾಪಸ್ ದೇ, ಕಾಂಗ್ರೆಸ್ ಆಸ್ತಿ ನಿರ್ಮಿಸುವ ಯಂತ್ರವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ. ದೇ ಅವರು ಕಳೆದ 58 ವರ್ಷಗಳಿಂದ ಕಾಂಗ್ರೆಸ್ನ ಜೊತೆಗಿದ್ದರು. ಕಾಂಗ್ರೆಸ್ ದಿಲ್ಲಿಯಿಂದ ಅಗರ್ತಲದ ವರೆಗೆ ತನ್ನನ್ನು ತಾನು ಮಾರಾಟ ಮಾಡಿಕೊಂಡಿದೆ. 

ಕಳೆದ ಐದಾರು ದಶಕಗಳಿಂದ ಇದ್ದ ತನ್ನಂತಹ ಹಲವರು ಈಗ ಕಾಂಗ್ರೆಸ್ ತ್ಯಜಿಸಿದ್ದಾರೆ. ಕಾಂಗ್ರೆಸ್ ನೊಂದಿಗೆ ಈಗಲೂ ಇರುವವರು ಪಕ್ಷ ಎತ್ತ ಕಡೆ ಸಾಗುತ್ತಿದೆ ಎಂದು ಚಿಂತಿಸಬೇಕೆಂದು ತಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ತನ್ನ ಗುರಿಗಳಿಗೆ ಕಾಂಗ್ರೆಸ್ ಅಡ್ಡಿ ಉಂಟು ಮಾಡಿದೆ. ತನ್ನ ನಂಬಿಕೆ ಅಥವಾ ಬದ್ಧತೆಯನ್ನು ಕಾಂಗ್ರೆಸ್ ಪೂರೈಸಿಲ್ಲ. ಆದುದರಿಂದ ಭಾರತದ ಸಂವಿದಾನದ ಮೇಲಿನ ನಂಬಿಕೆಯೊಂದಿಗೆ ಹಾಗೂ ಮಹಾತ್ಮಾ ಗಾಂಧಿ ತತ್ವದ ಆಧಾರದಲ್ಲಿ ನಾವು ಇಂದು ನೂತನ ಪಕ್ಷ (ತ್ರಿಪುರಾ ಡೆಮಾಕ್ರೆಟಿಕ್ ಫ್ರಂಟ್)ವನ್ನು ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News