×
Ad

"ಜನರ ವಾಕ್ ಸ್ವಾತಂತ್ರದ ಹಕ್ಕುಗಳ ರಕ್ಷಣೆಗಾಗಿ ಮಡಿದವರಿಗೆ ನೊಬೆಲ್ ಸಮರ್ಪಿಸುವೆ"

Update: 2021-10-08 22:50 IST
photo: twitter.com/NobelPrize

ಮಾಸ್ಕೊ,ಅ.8: ರಶ್ಯದ ಖ್ಯಾತ ಸುದ್ದಿಪತ್ರಿಕೆ ನೊವಾಯಾ ಗೆಝೆಟಾದ ಮುಖ್ಯ ಸಂಪಾದಕ ಡಿಮಿಟ್ರಿ ಮುರಾಟೊವ್ ಅವರು ತನ್ನ ನೊಬೆಲ್ ಶಾಂತಿ ಪುರಸ್ಕಾರವನ್ನು , ಕರ್ತವ್ಯ ನಿರ್ವಹಣೆ ವೇಳೆ ಮಡಿದ ತನ್ನ ಪತ್ರಿಕೆಯ ಪತ್ರಕರ್ತರಿಗೆ ಸಮರ್ಪಿಸಿದ್ದಾರೆ.

 ಈ ಪ್ರಶಸ್ತಿಯ ಶ್ರೇಯಸ್ಸನ್ನು ನಾನು ಪಡೆಯಲು ಸಾಧ್ಯವಿಲ್ಲ. ಈ ಪ್ರಶಸ್ತಿ ನನಗೆ ದೊರೆತಿದ್ದಲ್ಲ. ನೊವಾಯಾ ಗೆಝೆಟಾ ಪತ್ರಿಕೆಗೆ’ ಎಂದು 59 ವರ್ಷ ವಯಸ್ಸಿನ ಮುರಟೊವ್ ಅವರು ರಶ್ಯದ ಸುದ್ದಿಸಂಸ್ಥೆ ಟಾಸ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಜನರ ವಾಕ್ ಸ್ವಾತಂತ್ರದ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಸಾವನ್ನಪ್ಪಿದವರಿಗೂ ಕೂಡಾ ಈ ಪ್ರಶಸ್ತಿಯನ್ನು ಸಮರ್ಪಿಸುವುದಾಗಿಯೂ ಮುರಟೊವ್ ತಿಳಿಸಿದರು.
  ಖ್ಯಾತ ತನಿಖಾ ವರದಿಗಾರ್ತಿ ಅನ್ನಾ ಪೊಲಿಟಕೊವ್ಸ್ಕಾಯಾ ಸೇರಿದಂತೆ 200ನೇ ಇಸವಿಯಿಂದೀಚೆಗೆ, ನೊವಾಯಾ ಗೆಝೆಟಾದ ಆರು ಪತ್ರಕರ್ತರು ಹಾಗೂ ಅಂಕಣಕಾರರು ಹತ್ಯೆಯಾಗಿದ್ದರು. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಕಟು ಟೀಕಾಕಾರ್ತಿಯಾದ ಅನ್ನಾ ಪೊಲಿಟಕೊವ್ಸ್ಕಾಯಾ ಅವರನ್ನು 15 ವರ್ಷಗಳ ಹಿಂದೆ ಆಕೆಯ ಅಪಾರ್ಟ್ಮೆಂಟ್ ಬಳಿಯೇ ಹತ್ಯೆಗೈಯಲಾಗಿತ್ತು.

 ನೊವಾಯಾ ಗೆಝೆಟ್ನ ಸಂಪಾದಕರಾಗಿ ಮುರಟೊವ್ ಅವರು 1995ರಿಂದೀಚೆಗೆ ಕಾರ್ಯನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿಯಿಂದ ತನಗೆ ದೊರೆತ ಹಣದ ಸ್ವಲ್ಪ ಪಾಲನ್ನು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಸಮರ್ಪಿಸುವುದಾಗಿ ಅವರು ಹೇಳಿದ್ದಾರೆ. ಹಿಂದಿನ ಸೋವಿಯತ್ ಒಕ್ಕೂಟದ ನಾಯಕರೂ, 1993ರ ನೊಬೆಲ್ ಪ್ರಶಸ್ತಿ ಪುರಸ್ಕೃತರೂ ಆದ ಮಿಖೈಲ್ ಗೊರ್ಬಚೇವ್ ಅವರು ಸಹಸಂಸ್ಥಾಪಕರಾಗಿರುವ ನೊವಾಯಾ ಗೆಝೆಟಾ, ರಶ್ಯ ಅಧ್ಯಕ್ಷ ಪುತಿನ್ ಅವರ ನೀತಿಗಳ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತುತ್ತಾ ಬಂದಿದೆ. ಮುರಾಟೊವ್ಗೆ ನೊಬೆಲ್ ಗೌರವ ದೊರೆತಿರುವುದನ್ನು ಮಿಖೈಲ್ ಗೊರ್ಬಚೇವ್ ಸ್ವಾಗತಿಸಿದ್ದಾರೆ. ಇದೊಂದು ಅತ್ಯಂತ ಒಳ್ಳೆಯ ಸುದ್ದಿ ಎಂದವರು ಬಣ್ಣಿಸಿದ್ದಾರೆ. ‘ಆಧುನಿಕ ಜಗತ್ತಿನಲ್ಲಿ ಪತ್ರಿಕೆಯ ಮಹತ್ವವನ್ನು ಈ ಪ್ರಶಸ್ತಿಯು ಎತ್ತಿಹಿಡಿದಿದೆ ’ ಎಂದವರು ಹೇಳಿದ್ದಾರೆ.

ನಾನಾಗಿದ್ದರೆ ನವಾಲ್ನಿಗೆ ನೊಬೆಲ್ ಪ್ರಶಸ್ತಿ ನೀಡುತ್ತಿದ್ದೆ: ಮುರಟೊವ್
ಒಂದು ವೇಳೆ ನೊಬೆಲ್ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ತಾನಿದ್ದರೆ ತಾನು ಪುರಸ್ಕಾರವನ್ನು ಪ್ರಸಕ್ತ ಜೈಲಿನಲ್ಲಿರುವ ರಶ್ಯದ ಪ್ರತಿಪಕ್ಷ ನಾಯಕ, ಪುತಿನ್ ಅವರ ಕಟುಟೀಕಾಕಾರನಾದ ಅಲೆಕ್ಸಿ ನವಾಲ್ನಿ ಅವರಿಗೆ ನೀಡುತ್ತಿದ್ದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಡಿಮಿಟ್ರಿ ಮುರಾಟೊವ್ ಶುಕ್ರವಾರ ತಿಳಿಸಿದ್ದಾರೆ. ‘ಎಲ್ಲ ರೀತಿಯಲ್ಲೂ ಅಲೆಕ್ಸಿ ನವಾಲ್ನಿ ಅವರು ಈ ಪ್ರಶಸ್ತಿಗೆ ಬೇಕಾದ ಅರ್ಹತೆಯಲ್ಲಿ ನನಗಿಂತ ಮುಂದೆ ಇದ್ದಾರೆ ’ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News