ಕೊರೋನಾ ಮಾತಾ ದೇವಳ ನೆಲಸಮ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿ ಅರ್ಜಿದಾರನಿಗೆ ದಂಡ ಹೇರಿದ ಸುಪ್ರೀಂ ಕೋರ್ಟ್

Update: 2021-10-09 11:54 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರತಾಪಘರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯೊಡಗೂಡಿ ನಿರ್ಮಿಸಿದ್ದ ಕೊರೋನಾ ಮಾತಾ ಮಂದಿರವನ್ನು ನೆಲಸಮಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಈ ಪಿಐಎಲ್ ವ್ಯವಸ್ಥೆಯ ದುರುಪಯೋಗವಾಗಿದೆ ಎಂದು ಹೇಳಿದೆ.

ಜಸ್ಟಿಸ್ ಎಸ್ ಕೆ ಕೌಲ್ ಹಾಗೂ ಜಸ್ಟಿಸ್ ಎಂ ಎಂ ಸುಂದರೇಶ್ ಅವರ ಪೀಠ ಈ ಅರ್ಜಿಯನ್ನು ವಜಾಗೊಳಿಸಿದ ಜತೆಗೆ ಅರ್ಜಿದಾರನಿಗೆ ರೂ 5,000 ದಂಡ ಕೂಡ ವಿಧಿಸಿದೆ ಹಾಗೂ ದೇವಸ್ಥಾನವನ್ನು ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನು ಗಣನೆಗೆ ತೆಗೆದುಕೊಂಡಿದೆ. ದಂಡ ಮೊತ್ತವನ್ನು ವೆಚ್ಚದ ರೂಪದಲ್ಲಿ ಸುಪ್ರೀಂ ಕೋರ್ಟ್ ವಕೀಲರ ರೆಕಾರ್ಡ್ ವೆಲ್ಫೇರ್ ಫಂಡ್‍ಗೆ ನಾಲ್ಕು ವಾರಗಳೊಳಗಾಗಿ ಜಮೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ದೇವಸ್ಥಾನವನ್ನು ನೆಲಸಮಗೊಳಿಸಿ  ಸಂವಿಧಾನದ 32ನೇ ವಿಧಿಯನ್ವಯ ಪ್ರದತ್ತವಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ದೀಪಮಾಲ ಶ್ರೀವಾಸ್ತವ ಎಂಬವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಜೂಹಿ ಶುಕುಲ್ಪುರ್ ಗ್ರಾಮದಲ್ಲಿ ಕೊರೋನಾ ಮಾತಾ ದೇವಸ್ಥಾನವನ್ನು ಜೂನ್ 7ರಂದು ನಿರ್ಮಿಸಿದ್ದರೆ ಜೂನ್ 11ರ ರಾತ್ರಿ ಅದನ್ನು  ಪೊಲೀಸರು ನೆಲಸಮಗೊಳಿಸಿದ್ದರು ಎಂದು ಹೇಳಲಾಗಿತ್ತು. ಆದರೆ ತಾವು ನೆಲಸಮಗೊಳಿಸಿಲ್ಲ, ಬದಲು ಈ ವಿವಾದಿತ ಜಮೀನಿಗೆ ಸಂಬಂಧಿಸಿದವರು ನೆಲಸಮಗೊಳಿಸಿದ್ದರು ಎಂದು  ಪೊಲೀಸರು ಹೇಳಿದ್ದಾರೆ.

ದೇವಸ್ಥಾನವನ್ನು ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬವರು ಗ್ರಾಮದ ಜನರ ದೇಣಿಗೆ ಸಹಾಯದಿಂದ ನಿರ್ಮಿಸಿದ್ದು ಅಲ್ಲಿಗೆ ಅರ್ಚಕರೊಬ್ಬರನ್ನು ನೇಮಿಸಿದ ನಂತರ ಜನರು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ ತಮ್ಮ ಗ್ರಾಮ ಕೊರೋನಾದಿಂದ ದೂರವಿರಲಿ ಎಂದು ಪ್ರಾರ್ಥಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News