ಸುಳ್ಯ ಬಿಜೆಪಿ ಮುಖಂಡರ ವಿರುದ್ಧದ ತೀರ್ಪು ಅಮಾನತು

Update: 2021-10-10 03:56 GMT

ಸುಳ್ಯ : 2013 ರ ವಿಧಾನಸಬಾ ಚುನಾವಣೆಯ ಸಂದರ್ಭ ಜಿಪಂ ಸದಸ್ಯೆ ಸರಸ್ವತಿ ಕಾಮತ್ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿಪಂ ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ಮಕರ್ಂಜದಲ್ಲಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಅಮಾನತು ಮಾಡಿದೆ.

2013 ಮೇ 4 ರಂದು ಮಕರ್ಂಜ ಗ್ರಾಮದ ಕುದ್ಕುಳಿ ಎಂಬಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ ಆಗಿನ ಜಿಪಂ ಸದಸ್ಯೆ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಧಿಸಿ ಸುಳ್ಯ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸೆ.9ರಂದು ನ್ಯಾಯಾಲಯ ತೀರ್ಪು ನೀಡಿತ್ತು.

ಪ್ರಕರಣದ ಆರೋಪಿಗಳಾದ ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆಮ್ನೂರು, ರಾಮಚಂದ್ರ ಹಲ್ದಡ್ಕ, ಷಣ್ಮುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್. ಯಾನೆ ವಿಕಾಸ್ ರವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಈ ತೀರ್ಪು ಘೋಷಿಸಿದ ಸುಳ್ಯ ನ್ಯಾಯಾಲಯವು ಆರೋಪಿಗಳಿಗೆ ಮೇಲ್ಮನವಿಗೆ 1ತಿಂಗಳ ಕಾಲಾವಕಾಶ ನೀಡಿ ಜಾಮೀನು ನೀಡಿತ್ತು.

ಇದೀಗ ಆರೋಪಿಗಳು ಅಡಿಶನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪುತ್ತೂರು ಇಲ್ಲಿಗೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಇವರ ವಿರುದ್ಧ ಸುಳ್ಯ ನ್ಯಾಯಾಲಯವು ನೀಡಿರುವ ತೀರ್ಪನ್ನು ಅಮಾನತು ಮಾಡಿದ್ದಲ್ಲದೆ ಪ್ರಕರನಕ್ಕೆ ಸಂಬಂಧಿಸಿದ ಕಡತಗಳನ್ನು ಪುತ್ತೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಸೂಚಿಸಿದೆ. ಶಿಕ್ಷೆ ಘೋಷಿಸಲ್ಪಟ್ಟ ಅಪರಾಧಿಗಳು ಹದಿನೈದು ದಿನಗಳೊಳಗೆ ಟ್ರಯಲ್ ಕೋರ್ಟ್‌ನಲ್ಲಿ ಅವರಿಗೆ ವಿಧಿಸಿದ ದಂಡವನ್ನು ಡಿಪಾಸಿಟ್ ರೂಪದಲ್ಲಿ ಕಟ್ಟಬೇಕು ಮತ್ತು ಪ್ರತಿಯೊಬ್ಬ ಆರೋಪಿ ಕೂಡ ತಲಾ ಐವತ್ತು ಸಾವಿರ ರೂ. ವೈಯಕ್ತಿಕ ಬಾಂಡ್ ಕೋರ್ಟಿಗೆ ಸಲ್ಲಿಸಬೇಕು ಮತ್ತು ತಲಾ ಒಬ್ಬರ ಶ್ಯೂರಿಟಿ ಒದಗಿಸಬೇಕು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಸುಳ್ಯದ ನ್ಯಾಯಾಲಯದಿಂದ ತರಿಸಲ್ಪಟ್ಟ ದಾಖಲೆಗಳ ಆಧಾರದಲ್ಲಿ ನ.8 ರಿಂದ ವಿಚಾರಣೆ ನಡೆಸುವುದಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯ ತಿಳಿಸಿದೆ. ಹರೀಶ್ ಕಂಜಿಪಿಲಿ ಮತ್ತವರ ತಂಡದ ಪರವಾಗಿ ಪುತ್ತೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News