ಮಂಗಳೂರು ದಸರಾದ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ: ಸುನೀಲ್ ಕುಮಾರ್ ಬಜಾಲ್ ಆರೋಪ

Update: 2021-10-10 11:47 GMT

ಮಂಗಳೂರು, ಅ.10: ಮಂಗಳೂರು ದಸರಾ-2021ರ ಹೆಸರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಕೇವಲ ಬೀದಿ ದೀಪಾಲಂಕಾರಕ್ಕಾಗಿ 38 ಲಕ್ಷ ರೂ.ವಷ್ಟು ಹಣವನ್ನು ಖರ್ಚು ಮಾಡುವ ಮೂಲಕ ಲೂಟಿಗೆ ಇಳಿದಿದೆ ಎಂದು ಸಾಮಾಜಿಕ ಹೋರಾಟಗಾರ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

ಈ ಪ್ರಸ್ತಾಪಕ್ಕೆ ಈಗಾಗಲೇ ವ್ಯಾಪಕ ವಿರೋಧ ಕಂಡುಬಂದಿದ್ದು, ಜನತೆಯ ಹಣವನ್ನು ಈ ರೀತಿ ವಿನಾಃ ಕಾರಣ ಪೋಲು ಮಾಡುವ ನಗರ ಪಾಲಿಕೆ ಆಡಳಿತದ ಕ್ರಮ ಸರ್ವಥಾ ಸರಿಯಲ್ಲ. ಕುದ್ರೋಳಿ ಶ್ರಿ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ನವರಾತ್ರಿ ಉತ್ಸವವು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯುವ ಮೂಲಕ ಮಂಗಳೂರು ದಸರಾ ಎಂದೇ ಜನಜನಿತ ವಾಗಿದೆ. ಅಂತಹುದರಲ್ಲಿ ಕಳೆದ ವರ್ಷ ಕೊರೋನ ಸಂಕಷ್ಟದ ಕಾಲಘಟ್ಟದಲ್ಲೂ ಆರ್ಥಿಕ ಪುನಶ್ಚೇತನದ ಭಾಗವಾಗಿ, ಜನರಲ್ಲಿ ಮಾನಸಿಕ ಧೈರ್ಯವನ್ನು ತುಂಬುವ ಸಲುವಾಗಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ದಸರಾ ಉತ್ಸವ ನಡೆಯದಂತೆ ಅದೆಷ್ಟೋ ಪಿತೂರಿಗಳನ್ನು ಮಾಡಿದ್ದರೂ ದೇವಸ್ಥಾನದ ಆಡಳಿತ ಮಂಡಳಿಯು ದೃಢವಾಗಿ ನಿಂತು ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಿತ್ತು. ಅಲ್ಲದೆ 75 ಲಕ್ಷಕ್ಕಿಂತಲೂ ಅಧಿಕ ಹಣವು ಉಳಿತಾಯ ಮಾಡಲಾಗಿತ್ತು ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುದ್ರೋಳಿ ದೇವಸ್ಥಾನವು ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಉಲ್ಲೇಖ ಪತ್ರದಲ್ಲಿ ನಮೂದಿಸಿದೆ. ದೇವಸ್ಥಾನದ ಆಡಳಿತ ಮಂಡಳಿಯು ಮನಪಾದಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಿತ್ತೇ ? ಆರ್ಥಿಕ ಸಹಾಯಕ್ಕಾಗಿ ಬೇಡಿಕೆ ಇಟ್ಟಿತ್ತೇ ? ಎಂಬುದನ್ನು ಬಹಿರಂಗಪಡಿಸಬೇಕಿದೆ. ಕೇವಲ ಬೀದಿ ದೀಪಾಲಂಕಾರಕ್ಕಾಗಿ ಜನತೆಯ ತೆರಿಗೆಯ ಹಣವನ್ನು ಮಂಗಳೂರು ದಸರಾದ ಹೆಸರಿನಲ್ಲಿ ಖರ್ಚು ಮಾಡುತ್ತಿರುವುದು ದೇವಸ್ಥಾನದ ಗೌರವಕ್ಕೆ ಕುಂದಲ್ಲವೇ? ಪ್ರತೀ ವರ್ಷವೂ ಸ್ಥಳೀಯ ಭಕ್ತರು, ವಿವಿಧ ಸಂಘ ಸಂಸ್ಥೆಗಳು ಸ್ವಯಂಸ್ಪೂರ್ತಿಯಿಂದ ದಸರಾ ಮೆರವಣಿಗೆ ಸಾಗುವ ಬೀದಿಗಳಲ್ಲಿ ದೀಪಾಲಂಕಾರ ಮಾಡುವ ಮೂಲಕ ದೇವಸ್ಥಾನದ ಖಜಾನೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಅಂತಹ ಭಕ್ತಾದಿಗಳ ಮನಸಿಗೆ ಘಾಸಿಗೊಳಿಸಿ, ದಸರಾ ತಯಾರಿಗಾಗಿ ನಡೆದ ಸಭೆಯಲ್ಲಿ ಎಲ್ಲರನ್ನೂ ದಾರಿ ತಪ್ಪಿಸಿ ಏಕಾಏಕಿಯಾಗಿ ಅವರ ಕೈಯಿಂದ ಕಿತ್ತೊಗೆದು ಮಂಗಳೂರು ಮಹಾನಗರ ಪಾಲಿಕೆಯು ದೀಪಾಲಂಕಾರ ಮಾಡುವುದರ ಹಿಂದಿನ ಮಸಲತ್ತು ಏನು ಎಂಬುದನ್ನೂ ಕೂಡ ಬಹಿರಂಗಪಡಿಸಬೇಕಿದೆ ಎಂದು ಸುನೀಲ್ ಕುಮಾರ್ ಬಜಾಲ್ ಒತ್ತಾಯಿಸಿದ್ದಾರೆ.

ಸೆ.30ರ ಮನಪಾದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಬಂದಿದೆ. ಆ ಬಳಿಕ ಟೆಂಡರು ಕರೆಯಬೇಕು. ಆದರೆ ಇಲ್ಲಿ ಸರಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮರುದಿನದಿಂದಲೇ ದಾರಿ ದೀಪಾಲಂಕಾರ ಮಾಡಲು ಶುರು ಮಾಡಿದ್ದಾರೆ. ಒಟ್ಟಿನಲ್ಲಿ ಸರಕಾರದ ಹಣವನ್ನು ಲೂಟಿ ಮಾಡಲು ಅಥವಾ ಕುದ್ರೋಳಿ ಕ್ಷೇತ್ರಕ್ಕೆ ಕಪ್ಪುಮಸಿ ಬಳಿಯಲು ಪಿತೂರಿ ಮಾಡಿದಂತಾ ಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News