×
Ad

ಅಧಿಕಾರಿಯ ಮನೆಗೆ ನುಗ್ಗಿ ಖಾಲಿ ಕೈಯಲ್ಲಿ ಮರಳುವ ಮುನ್ನ ನೋಟಿಸ್ ಹಚ್ಚಿ ಬಂದ ಕಳ್ಳರು!

Update: 2021-10-11 09:32 IST

ಭೋಪಾಲ್: ಮಧ್ಯಪ್ರದೇಶದಲ್ಲಿ ಹಿರಿಯ ಅಧಿಕಾರಿಯೊಬ್ಬರ ಮನೆಯ ಬೀಗ ಒಡೆದು  ನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ್ದಲ್ಲದೇ ಹೊರಡುವ ಮುನ್ನ "ಕಲೆಕ್ಟರ್, ಮನೆಯಲ್ಲಿ ಏನೂ ಇಲ್ಲ ಎಂದಾದ ಮೇಲೆ ಮನೆಗೆ ನೀವು ಬೀಗ ಹಾಕಬಾರದು" ಎಂಬ ನೋಟಿಸ್ ಹಚ್ಚಿ ಬಂದಿರುವ ಕುತೂಹಲಕರ ಪ್ರಸಂಗ ವರದಿಯಾಗಿದೆ.

ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ದೆವಾಸ್ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತ್ರಿಲೋಚನ್ ಗೌರ್ ನಿವಾಸ.

ಕಳ್ಳತನ ನಡೆದ ಮನೆ ಶಾಸಕ ಮತ್ತು ದೆವಾಸ್ ಉಪವಿಭಾಗಾಧಿಕಾರಿ ಪ್ರದೀಪ್ ಸೋನಿಯವರ ನಿವಾಸದ ನಡುವೆ ಇದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಪ್ರಸ್ತುತ ದೆವಾಸ್‌ನ ಖತೇಗಾಂವ್ ತಾಲೂಕಿನಲ್ಲಿ ಉಪವಿಭಾಗ ಮ್ಯಾಜಿಸ್ಟ್ರೇಟ್ ಆಗಿರುವ ಗೌರ್ ಕಳೆದ 15-20 ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಮನೆಗೆ ವಾಪಸಾದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಆ ಬಳಿಕ ಅಧಿಕಾರಿ ಘಟನೆ ಬಗ್ಗೆ ದೂರು ನೀಡಿದರು.

ಘಟನೆ ಯಾವಾಗ ನಡೆದಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇನ್‌ಸ್ಪೆಕ್ಟರ್ ಉಮ್ರವ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News